ಬೆಂಗಳೂರು:ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ವಾಮ ಮಾರ್ಗದಲ್ಲಿ ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜಭವನದ ಷಡ್ಯಂತ್ರಗಳನ್ನು ವಿರೋಧಿಸಿ ಕಾಂಗ್ರೆಸ್‌ನ ಎಲ್ಲಾ ಜನಪ್ರತಿನಿಧಿಗಳು ಇಂದಿಲ್ಲಿ ರಾಜಭವನ ಚಲೋ ನಡೆಸಿದರು.
ಅಲ್ಲದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಆಡಳಿತದಲ್ಲಿ ಸಚಿವರಾಗಿದ್ದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲರ ತಾರತಮ್ಯ ನೀತಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖಂಡಿಸಿದ್ದಾರೆ.
ರಾಜ್ಯಪಾಲರ ವಿರುದ್ಧ ಪ್ರತಿಭಟನೆ
ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವುದಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ನಾಯತ್ವದಲ್ಲಿ ಕಾಂಗ್ರೆಸ್‌ನ ಸಚಿವರು, ಸಂಸದರು, ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿ ಕೇಂದ್ರ ಮತ್ತು ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶ ನೀಡುತ್ತಾರೆ, ಆದರೆ ಎನ್‌ಡಿಎ ಕೂಟದವರು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡದೆ ತಾರತಮ್ಯ ಮಾಡುತ್ತಿದ್ದಾರೆ.
ಜನತಂತ್ರ ವ್ಯವಸ್ಥೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಏಕೈಕ ಉದ್ದೇಶದಿಂದ ಕೇಂದ್ರ ಸರ್ಕಾರ ರಾಜಭವನವನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ರಾಜಭವನ ಚಲೋ
ನಂತರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನಾಯತ್ವದಲ್ಲಿ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೂ ಸಿದ್ದರಾಮಯ್ಯ ಹೊರತುಪಡಿಸಿ ಉಳಿದೆಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳು ರಾಜಭವನ ಚಲೋ ನಡೆಸಿದರು.
ರಾಜ್ಯಪಾಲರನ್ನು ಭೇಟಿ ಮಾಡಿ, ಎನ್‌ಡಿಎ ಸದಸ್ಯರ ಮೇಲಿರುವ ಆರೋಪಗಳಿಗೂ ಪ್ರಾಸಿಕ್ಯೂಷನ್‌ಗೆ ಅವಕಾಶ ಕೊಡಿ ಎಂದು ಕೇಳಲು ಹೊರಟವರು, ದಾರಿಯುದ್ದಕ್ಕೂ ರಾಜ್ಯಪಾಲರು ತೊಲಗಲಿ ಎಂದು ಘೋಷಣೆ ಕೂಗಿದರು.
ಸಿದ್ದರಾಮಯ್ಯ ನೇತೃತ್ವದ ಬಲಿಷ್ಠ ಸರ್ಕಾರವನ್ನು ಹಿಂಬಾಗಿಲಿನಿಂದ ಅಸ್ಥಿರಗೊಳಿಸಲು ಯತ್ನಿಸುತ್ತಿರುವುದು ಕುತಂತ್ರ ಎಂದು ಟೀಕಿಸಿದರು.
ಐದು ಪುಟಗಳ ಮನವಿ ಪತ್ರ
ನಂತರ ರಾಜಭವನಕ್ಕೆ ಧಾವಿಸಿ, ರಾಜ್ಯಪಾಲರನ್ನು ಭೇಟಿ ಮಾಡಿ ಐದು ಪುಟಗಳ ಮನವಿ ಪತ್ರ ಸಲ್ಲಿಸಿ, ಕುಮಾರಸ್ವಾಮಿ ಸೇರಿದಂತೆ ನಾಲ್ವರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಮನವಿ ಮಾಡಿದರು.
ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ರಾಜ್ಯಪಾಲರ ಹುದ್ದೆ ಸಂವಿಧಾನ ನೀಡಿರುವ ಪೀಠ, ರಾಜ್ಯಪಾಲರ ಕಚೇರಿ ಒಂದು ರಾಜಕೀಯ ಪಕ್ಷದ ಕಚೇರಿ ಆಗಬಾರದು, ಹುದ್ದೆ ಘನತೆಗೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು ಎಂಬುದು ನಮ್ಮ ಅಭಿಲಾಷೆ.
ನ್ಯಾಯ ನೀಡುವ ಭರವಸೆ
ರಾಜ್ಯಪಾಲರು ನಮಗೆ ಟೀ, ಕಾಫಿ ಮತ್ತು ಉಪಹಾರ ಕೊಟ್ಟು ಉಪಚರಿಸಿದರು, ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನ್ಯಾಯ ನೀಡುವ ಭರವಸೆ ನೀಡಿದರು ಎಂದರು.
ಲೋಕಾಯುಕ್ತ ಎಸ್‌ಐಟಿ ಅವರು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಮಂತ್ರಿ ಕುಮಾರಸ್ವಾಮಿ ಹಾಗೂ ಮೂರು ಜನ ಮಾಜಿ ಮಂತ್ರಿಗಳ ಅಕ್ರಮಗಳ ವಿರುದ್ಧ ನ್ಯಾಯಾಲಯದ ಸೂಚನೆಯಂತೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡಿದ್ದಾರೆ.
ಆದರೂ, ಏನೂ ಕ್ರಮ ತೆಗೆದುಕೊಂಡಿಲ್ಲ, ನಮ್ಮ ಮುಖ್ಯಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುವ ರಾಜ್ಯಪಾಲರು, ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ, ತಾರತಮ್ಯ ಎಸಗಿ ನಮ್ಮ ವಿರುದ್ಧ ಕೆಲಸ ಮಾಡಿದ್ದಾರಲ್ಲವೇ.
ನಾಲ್ಕು ಜನರ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾಯ್ದೆ, 197 ಸಿಪಿಸಿ ಕಾಯ್ದೆಯಡಿ ಸೆಕ್ಷನ್ ೧೭ಎ ಪ್ರಕಾರ ಲೋಕಾಯುಕ್ತ ಅನುಮತಿ ಕೇಳಿತ್ತು, ಆದರೂ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಲಿಲ್ಲ.
ಒಂದೇ ದಿನದಲ್ಲಿ ತೀರ್ಮಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾರೋ ಅರ್ಜಿ ಕೊಟ್ಟರು ಎಂದು ಒಂದೇ ದಿನದಲ್ಲಿ ತೀರ್ಮಾನ ತೆಗೆದುಕೊಂಡರು.
ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತೇ ಹೊರತು ಯಾವುದೇ ಒಂದು ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಅಲ್ಲ, ಹುದ್ದೆಯನ್ನು ಸಂವಿಧಾನ ರಕ್ಷಣೆಗೆ ಬಳಸಿಕೊಳ್ಳಬೇಕು ಎಂಬುದು ಸಾಮಾನ್ಯ ಜನರ ಅಭಿಪ್ರಾಯ.
ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಪೂರಕ ದಾಖಲೆಗಳಿಲ್ಲ, ಕುಮಾರಸ್ವಾಮಿ ಸೇರಿದಂತೆ ಮೂವರು ಮಂತ್ರಿಗಳ ವಿರುದ್ಧ ದಾಖಲೆ ಇದ್ದರೂ ರಾಜ್ಯಪಾಲರು ಪಕ್ಷಪಾತ ಏಕೆ ಮಾಡಿದರು.
ಗೌರವ ಉಳಿಯಬೇಕು
ರಾಜ್ಯಪಾಲರ ಕಚೇರಿ ಸಮಾನತೆಗೆ ಹೆಸರಾಗಿರಬೇಕು, ಸಂವಿಧಾನಿಕ ಪೀಠಕ್ಕೆ ಇರುವ ಗೌರವ ಉಳಿಯಬೇಕು, ಅದಕ್ಕಾಗಿಯೇ ನಾವು ರಾಜಭವನ ಚಲೋ ಮಾಡಿದ್ದೇವೆ, ನ್ಯಾಯದ ಪರವಾಗಿ ಧ್ವನಿ ಎತ್ತಲು ನಾವು ಮುಂದಾಗಿದ್ದೇವೆ ಎಂದರು.
ನಾವ್ಯಾರು ಇಲ್ಲಿ ಶಾಶ್ವತವಲ್ಲ, ರಾಜಭವನ ರಾಜಕೀಯ ಕಚೇರಿ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ, ರಾಜ್ಯಪಾಲರ ಸ್ಥಾನ ಸರ್ಕಾರ ರಚನೆ ಮಾಡುವ ಪೀಠ.
ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಹುನ್ನಾರ ಮಾಡಲಾಗುತ್ತಿದೆ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ರಾಜ್ಯಪಾಲರ ಕಚೇರಿಯಿಂದ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದರು.
ರಾಜಭವನದ ಮುಂದೆ ಪ್ರಕರಣಗಳು ಬಾಕಿ ಇಲ್ಲ
ತಮ್ಮ ಬಳಿ ಯಾವುದೇ ಪ್ರಕರಣಗಳು ಬಾಕಿ ಇಲ್ಲ ಎಂಬುದಾಗಿ ರಾಜ್ಯಪಾಲರು ತಿಳಿಸಿದ್ದಾರೆ, ಅವರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು, ಇದು ನಿಜವೋ, ಸುಳ್ಳೋ ಪರಿಶೀಲಿಸಲಾಗುವುದು, ಒಳಗಿನ ವಿಚಾರವನ್ನು ಮಾಧ್ಯಮದ ಮೂಲಕ ಚರ್ಚೆ ಮಾಡುವುದಿಲ್ಲ, ಅವರು ನನ್ನ ಬಳಿ ಯಾವುದೇ ಅರ್ಜಿಗಳಿಲ್ಲ ಎಂದು ಹೇಳಿದ್ದಾರೆ ಅದನ್ನು ನಾವು ಪರಿಶೀಲಿಸುತ್ತೇವೆ.
ರಾಜ್ಯಪಾಲರಿಗೆ ಪರ್ಯಾಯ ದಾರಿಗಳಿಲ್ಲ, ಅವರು ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲೇಬೇಕು ಎಂದರು.