ಸೆಪ್ಟೆಂಬರ್ 2ರ ಮಧ್ಯಾನ್ಹ 2-30ಕ್ಕೆ ವಿಚಾರಣೆ ಮುಂದುವರಿಕೆ
ಬೆಂಗಳೂರು:ಮುಡಾದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ ಮೊಕದ್ದಮೆಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಸೆಪ್ಟೆಂಬರ್ 2ರ ಮಧ್ಯಾನ್ಹ 2-30ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ, ವಿಚಾರಣೆಯ ಮೂರನೇ ದಿನವಾದ ಇಂದು ಮುಖ್ಯಮಂತ್ರಿ ಹಾಗೂ ದೂರುದಾರರ ಪರ ಕರ್ನಾಟಕ ಹಾಗೂ ಸುಪ್ರೀಂಕೋರ್ಟ್‌ನ ಘಟಾನುಘಟಿ ನ್ಯಾಯವಾದಿಗಳು ವಾದ-ಪ್ರತಿವಾದ ಮಂಡಿಸಿದರು.
ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿರುವ ಅರ್ಜಿಯ ಮೂರನೇ ದಿನದ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಬೆಳಗ್ಗೆ ಕೈಗೆತ್ತಿಕೊಂಡಿತು.
ಇಡೀ ದಿನ ಉಭಯ ಕಕ್ಷಿದಾರರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಬಾಕಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿ ಆದೇಶಿಸಿದರು.
ಜನಪ್ರತಿನಿಧಿಗಳ ನ್ಯಾಯಾಲಯ
ಇದರೊಂದಿಗೆ ಸದರಿ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯವು ಹೈಕೋರ್ಟ್‌ನ ತೀರ್ಪು ಬರುವವರೆಗೆ ಯಾವುದೇ ಆದೇಶ ನೀಡುವಂತಿಲ್ಲ.
ರಾಜಭವನದ ವಿಶೇಷ ಕಾರ್ಯದರ್ಶಿ ಪರ ಹಿರಿಯ ನ್ಯಾಯವಾದಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಮುಖ್ಯಮಂತ್ರಿ ವಿರುದ್ಧದ ದೂರುದಾರರ ಪರ ಹಿರಿಯ ನ್ಯಾಯವಾದಿಗಳಾದ ಮಣಿಂದರ್ ಸಿಂಗ್, ಪ್ರಭುಲಿಂಗ ನಾವಡಗಿ ಹಾಗೂ ರಂಗನಾಥ ರೆಡ್ಡಿ ವಾದ ಮಂಡಿಸಿದರು.
ಮುಖ್ಯಮಂತ್ರಿ ಪರ ನ್ಯಾಯವಾದಿಗಳಾದ ಅಭಿಷೇಕ್ ಮನು ಸಿಂಘ್ವಿ, ರವಿವರ್ಮ ಕುಮಾರ್ ವಾದ ಮಂಡಿಸಿದರು.
ಸಿಂಘ್ವಿ ಅವರ ವಾದಕ್ಕೆ ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್, ಸುದೀರ್ಘವಾಗಿ ಹಗರಣವನ್ನು ದಾಖಲೆಗಳ ಸಮೇತ ಎಳೆ ಎಳೆಯಾಗಿ ಬಿಡಿಸಿಟ್ಟರು.
ಎಲ್ಲಾ ಕ್ರಮಗಳು ಕಾನೂನಾತ್ಮಕ
ರಾಜ್ಯಪಾಲರು ಈ ವಿಷಯದಲ್ಲಿ ತೆಗೆದುಕೊಂಡಿರುವ ಎಲ್ಲಾ ಕ್ರಮಗಳು ಕಾನೂನಾತ್ಮಕವಾಗಿವೆ, ಅವರು ಪ್ರಕರಣದ ಆರೋಪಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡುವ ಅಗತ್ಯವೂ ಇರಲಿಲ್ಲ.
ಆದರೂ ರಾಜ್ಯಪಾಲರು ವಿವರಣೆ ಕೋರಿದ್ದಾರೆ, ಇದಕ್ಕೆ ರಾಜ್ಯ ಸಚಿವ ಸಂಪುಟವೇ 91 ಪುಟಗಳ ವಿವರಣೆ ಕೊಟ್ಟಿದೆ.
ಮುಖ್ಯಮಂತ್ರಿ ಅವರಿಂದ ನೇಮಕಗೊಂಡ ಸಚಿವರುಗಳು, ಅವರ ವಿರುದ್ಧವೇ ಟಿಪ್ಪಣಿ ನೀಡಲು ಸಾಧ್ಯವೇ, ಸಹಜವಾಗಿ ಅವರ ಪರವಾದ ತೀರ್ಮಾನ ಕೈಗೊಂಡು ಅಡ್ವೋಕೇಟ್ ಜನರಲ್ ನೀಡಿದ ವರದಿಯನ್ನೇ ಯಥಾವತ್ತಾಗಿ ಅಂಟಿಸಿದ್ದಾರೆ.
ಯಥಾವತ್ ವರದಿ
ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಗಮನ ಸೆಳೆದ ಕೇಂದ್ರ, ಇಂತಹ ನಗರದಲ್ಲಿ ಇರುವವರು ಮಾಹಿತಿ ತಂತ್ರಜ್ಞಾನದ ಗಂಧವೇ ಇಲ್ಲದೆ ವರದಿಯನ್ನೇ ಯಥಾವತ್ತಾಗಿ ಅಂಟಿಸಿ ಕಳುಹಿಸಿದ್ದಾರೆ ಎಂದು ಮೂದಲಿಸಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲು, ತಮಗೆ ಬಂದ ದೂರು, ಅದಕ್ಕೆ ಸರ್ಕಾರದ ಉತ್ತರ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ರಾಜ್ಯಪಾಲರು ವಿವರವಾಗಿ ದಾಖಲೆ ಸಿದ್ಧಪಡಿಸಿ, ಪ್ರಾಸಿಕ್ಯೂಷನ್‌ಗೆ ನೀಡಿದ್ದಾರೆ.
ಅದರ ಪೂರ್ಣ ವರದಿ ಲಕೋಟೆಯಲ್ಲಿ ನ್ಯಾಯಪೀಠದ ಅವಗಾಹನೆಗೆ ತಂದಿದ್ದು, ಇದು ಬಹಿರಂಗಗೊಂಡರೆ ಹಗರಣ ಮುಚ್ಚಿಹಾಕುವ ಪ್ರಯತ್ನ ನಡೆಯಬಹುದು ಎಂದು ಮೆಹ್ತ ಮನವಿ ಮಾಡಿದರು.
ವಿವೇಚನೆ ಬಳಸಿ ಅನುಮತಿ
ಪ್ರಾಸಿಕ್ಯೂಷನ್‌ಗೆ ಅನುಮತಿ ಸಂಬಂಧ ಸಂವಿಧಾನಿಕ ಪೀಠಗಳು ನೀಡಿರುವ ತೀರ್ಪುಗಳನ್ನು ನ್ಯಾಯಾಲಯದ ಗಮನಕ್ಕೆ ತಂದ ಮೆಹ್ತ, ರಾಜ್ಯಪಾಲರ ಕಡತ ಗಮನಿಸಿದರೆ, ಅವರು ವಿವೇಚನೆ ಬಳಸಿದಂತೆ ಕಂಡುಬರುತ್ತದೆ.
ಯಾವುದೇ ಆಡಳಿತಾತ್ಮಕ ಆದೇಶ ವಿವೇಚನೆಯಿಂದ ಕೂಡಿರಬೇಕು, ಆಗ, ಯಾವುದೇ ತೀರ್ಪುಗಳ ಸಮರ್ಥನೆ ಬೇಕಾಗಿಲ್ಲ ಎಂದು ಕೆಲವು ತೀರ್ಪುಗಳನ್ನು ಉದಾಹರಿಸಿದರು.
ರಾಜ್ಯಪಾಲರು ವಿವರವಾಗಿ ಸಾಕ್ಷ್ಯ ವಿಚಾರಣೆ ನಡೆಸುವಂತಿಲ್ಲ, ಅವರು ನಿಯಮ 19ರಡಿಯೂ ಅನುಮತಿ ನೀಡಿಲ್ಲ, 17ಎ ಅಡಿಯಲ್ಲಿ ಮಾತ್ರ ಅನುಮತಿ ನೀಡಿದ್ದಾರೆ, ಇದು ತನಿಖೆಗೆ ಮಾತ್ರ ನೀಡಿರುವ ಅನುಮತಿ ಎಂಬುದಾಗಿ ಪರಿಗಣಿಸಬೇಕು ಎಂದರು.
ಸಾರ್ವಜನಿಕ ಸೇವಕರಿಗೂ ಅನ್ವಯ
ನಿಯಮ 17ಎ ಎಲ್ಲಾ ಸಾರ್ವಜನಿಕ ಸೇವಕರಿಗೂ ಅನ್ವಯವಾಗುತ್ತದೆ ಎಂದು ಹೇಳಿ, ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.
ರಾಜ್ಯಪಾಲರು ಮುಡಾ ಬಗ್ಗೆ ತಮ್ಮ ದಾಖಲೆಯಲ್ಲಿ ಪೂರ್ಣ ಮಾಹಿತಿ ನೀಡಿದ್ದಾರೆ, 40:60 ಮತ್ತು 50:50 ಅನುಪಾತದ ನಿಯಮ ಬದಲಿಸಲಾಗಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ಅಂದಿನ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ, ಬಹಳ ಪ್ರತಿಷ್ಠಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ, ಇಷ್ಟೆಲ್ಲಾ ವ್ಯತಿರಿಕ್ತ ಅಂಶಗಳಿದ್ದರೂ ರಾಜ್ಯ ಸಚಿವ ಸಂಪುಟ ಮುಖ್ಯಮಂತ್ರಿ ಪರ ನಿರ್ಣಯ ಕೈಗೊಂಡಿದೆ.
ಇಷ್ಟೆಲ್ಲಾ ನ್ಯೂನತೆಗಳ ನಡುವೆಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕುರಿತು ಸ್ವಂತ ವಿವೇಚನೆಯಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಂಪಿ ಪೋಲಿಸ್ ಎಸ್ಟಾಬ್ಲಿಶ್‌ಮೆಂಟ್ ಪ್ರಕರಣ ಉಲ್ಲೇಖಿಸಿದರು.
ಹಲವು ನಿಯಮ ಉಲ್ಲಂಘನೆ
ಮುಖ್ಯಮಂತ್ರಿ ಅವರು ಮುಡಾದಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ, ಈ ಭೂಮಿ ದಲಿತರೊಬ್ಬರಿಗೆ ಸೇರಿದ್ದು, ಬಳಿಕ ಮುಖ್ಯಮಂತ್ರಿ ಅವರ ಸಂಬಂಧೀಕರು ಖರೀದಿ ಮಾಡಿ ಅದನ್ನು ಸಿದ್ದರಾಮಯ್ಯ ಪತ್ನಿಗೆ ದಾನ ನೀಡಿದ್ದಾರೆ.
ಮುಡಾ ಸಭೆ ಈ ಎಲ್ಲ ನಿರ್ಣಯ ಕೈಗೊಳ್ಳುವಾಗ ಮುಖ್ಯಮಂತ್ರಿ ಅವರ ಪುತ್ರ ಹಾಜರಾಗಿ ಸಹಿ ಮಾಡಿರುತ್ತಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್‌ಗೆ ಮೊದಲು ಪ್ರಾಸಿಕ್ಯೂಷನ್‌ಗೆ ಕೊಡುವ ಅವಕಾಶ ಇದೆ ಎಂದು ಕೆಲವು ದಾಖಲೆಗಳನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದು, ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಸಮರ್ಥಿಸಿಕೊಂಡರು.
ಅನುಮತಿ ನೀಡುವ ಮುನ್ನ ಆರೋಪಿಯ ಹೇಳಿಕೆಗಳನ್ನು ದಾಖಲಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಮೆಹ್ತ ಉಲ್ಲೇಖಿಸಿದರು.