ಸೆ. 12ಕ್ಕೆ ವಾದ-ಪ್ರತಿವಾದ ಪೂರ್ಣಗೊಳ್ಳಬೇಕು:ನ್ಯಾಯಮೂರ್ತಿ
ಬೆಂಗಳೂರು:ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಪ್ರಕರಣವನ್ನು ಗಣೇಶ ಚತುರ್ಥಿಗೂ ಮುನ್ನವೇ ಮುಗಿಸೋಣ ಎಂದು ವಾದಿ ಮತ್ತು ಪ್ರತಿವಾದಿ ವಕೀಲರುಗಳಿಗೆ ಸಲಹೆ ಮಾಡಿದರು.
ಆದರೆ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ತಾವು ಈ ವಿಷಯದಲ್ಲಿ ವಾದ ಮಾಡಬೇಕಿದೆ, ನನಗೆ ಒಂದು ವಾರಗಳ ಸಮಯಾವಕಾಶ ಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನನಗೆ ಸೆಪ್ಟೆಂಬರ್ 21ರವರೆಗೂ ಸಮಯವಿಲ್ಲ, 9ರಂದು ಅಡ್ವೋಕೇಟ್ ಜನರಲ್ ವಾದ ಮಂಡಿಸಿದ ನಂತರ ನನ್ನ ವಾದ ಮಂಡನೆ ಮಾಡಬೇಕಿದೆ ಎಂದರು.
ಸೆ.9ಕ್ಕೆ ಮುಂದಿನ ವಿಚಾರಣೆ
ಆಗ ನ್ಯಾಯಾಮೂರ್ತಿಗಳು, ಅಕ್ಟೋಬರ್ 2ರಿಂದ ನ್ಯಾಯಾಲಯಗಳಿಗೆ ರಜೆ ಇರಲಿದೆ, ಅದಕ್ಕೆ ಮುನ್ನವೇ ಪ್ರಕರಣ ಮುಗಿಸುವ ಅಗತ್ಯವಿದೆ, ಅಡ್ವೋಕೇಟ್ ಜನರಲ್ ಸಲಹೆಯಂತೆ ಸೆಪ್ಟೆಂಬರ್ 9ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳೋಣ, ಆದರೆ ಸೆಪ್ಟೆಂಬರ್ 12ಕ್ಕೆ ವಾದ-ಪ್ರತಿವಾದ ಪೂರ್ಣಗೊಳ್ಳಬೇಕು, ಇದನ್ನು ಮತ್ತಷ್ಟು ಮುಂದುವರೆಸಲು ಸಾಧ್ಯವಿಲ್ಲ ಎಂದು ತಿಳಿಸಿ, ಈ ತಿಂಗಳ 9ಕ್ಕೆ ವಿಚಾರಣೆಯನ್ನು ಮುಂದೂಡಿದರು.
ಇದಕ್ಕೂ ಮುನ್ನ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಸುದೀರ್ಘ ವಾದ ಮಂಡಿಸಿ ಕರ್ನಾಟಕ ಸರ್ಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುತ್ತಿದೆ, ಆದರೆ, ರಾಜ್ಯಪಾಲರು, ಮುಖ್ಯಮಂತ್ರಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವುದು, ಅವರ ಕುಟುಂಬದವರು ಬೆಲೆ ಬಾಳುವ 14 ನಿವೇಶನಗಳನ್ನು ಪಡೆದು ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಎಂದರು.
ಮುಂದುವರಿದ ವಾದ ಮಂಡಿಸಿದ ಅವರು, ಇಲ್ಲಿ, ಮುಖ್ಯಮಂತ್ರಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಪ್ರಭಾವ ಬಳಸಿ ತಮ್ಮ ಕುಟುಂಬಕ್ಕೆ ನಿವೇಶನಗಳನ್ನು ನೀಡಿದ್ದಾರೆ ಎಂಬುದಕ್ಕಷ್ಟೇ ಸೀಮಿತ.
ಸಿದ್ದರಾಮಯ್ಯ ಅಧಿಕಾರದಲ್ಲಿ ಭಾಗಿ
ಸಿದ್ದರಾಮಯ್ಯ ಕರ್ನಾಟಕ ಸರ್ಕಾರದಲ್ಲಿ ಕಳೆದ ಎರಡು ದಶಕಗಳಿಂದ ಒಂದಲ್ಲಾ ಒಂದು ಅಧಿಕಾರದಲ್ಲಿ ಭಾಗಿಯಾಗಿದ್ದಾರೆ, ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿವೇಶನಗಳ ಹಂಚಿಕೆ ಆಗದಿರಬಹುದು ಆದರೆ, ಅವರು ಬೇರೆ ಬೇರೆ ಅಧಿಕಾರ ಹುದ್ದೆಯಲ್ಲಿ ಇದ್ದಾಗ ಈ ಪ್ರಕ್ರಿಯೆ ನಡೆದಿದೆ ಎಂದು ವಕೀಲರು ಕೆಲವು ದಾಖಲೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.
2015ರಲ್ಲಿ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಸೂತ್ರ ರೂಪಿಸಲಾಯಿತು, ಇದಕ್ಕೂ ಮೊದಲು ಅಂದರೆ 2014ರಲ್ಲಿ ಮುಖ್ಯಮಂತ್ರಿ ಅವರ ಪತ್ನಿ 1998ರಲ್ಲಿ ನಡೆದ ಭೂಸ್ವಾಧೀನಕ್ಕೆ ಪರ್ಯಾಯ ನಿವೇಶನ ನೀಡುವಂತೆ ಮನವಿ ಮಾಡಿದರು.
2017ರಲ್ಲಿ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆಯ ತೀರ್ಮಾನ ಕೈಗೊಳ್ಳಲಾಯಿತು, ಅಂದು ತೆಗೆದುಕೊಂಡ ತೀರ್ಮಾನಕ್ಕೂ ಮುಖ್ಯಮಂತ್ರಿ ಅವರಿಗೂ ಸಂಬಂಧವಿದೆ.
ಅರ್ಹತೆ ಇಲ್ಲದವರಿಗೆ 14 ನಿವೇಶನ
ಒಂದೂ ನಿವೇಶನದ ಅರ್ಹತೆ ಇಲ್ಲದವರಿಗೆ 14 ನಿವೇಶನ ನೀಡಿದ್ದಾರೆ. ಇಂತಹ ಕೃತ್ಯಕ್ಕೆ ತನಿಖೆ ಅವಶ್ಯಕತೆ ಇಲ್ಲ ಎಂದು ಹೇಳಲು ಸಾಧ್ಯವೇ ಎಂದು ವಾದ ಮುಂದಿಟ್ಟರು.
ಅಷ್ಟೇ ಅಲ್ಲ, ನಿಯಮ 17ಎ ಪ್ರಕಾರ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸದೆಯೂ ರಾಜ್ಯಪಾಲರು ದಾಖಲೆಗಳನ್ನು ಆಧರಿಸಿ ಪ್ರಾಸಿಕ್ಯೂಷನ್‌ಗೆ ನೀಡಬಹುದು.
ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ, ನೀಮ್ಮ ತೀರ್ಪೂ ಸೇರಿದಂತೆ ಅನೇಕ ತೀರ್ಪುಗಳಿವೆ ಎಂದಾಗ, ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ಯಾವುದೇ ಮನವಿ ಸಲ್ಲಿಸದೆಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದು, ಈಗಾಗಲೇ ಹಿಂದಿನ ತೀರ್ಪಿನಲ್ಲಿ ನಿಲುವು ತೆಗೆದುಕೊಳ್ಳಲಾಗಿದೆ, ಪೋಲಿಸ್ ಅಧಿಕಾರಿಯೇ ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದರು.
ದುರುದ್ದೇಶದಿಂದ ಕೂಡಿದೆ
ನಂತರ ವಕೀಲರು ವಾದ ಮುಂದುವರಿಸಿ, ಮುಖ್ಯಮಂತ್ರಿ ಅವರು ತಮ್ಮ ಕುಟುಂಬಕ್ಕೆ ನಿವೇಶನ ಪಡೆಯುವಲ್ಲಿ ಒಮ್ಮೆ ಮಾತ್ರ ತಪ್ಪು ಮಾಡಿಲ್ಲ, ಪದೇ ಪದೇ ಇಂತಹ ಕೃತ್ಯ ಪುನರಾವರ್ತನೆಯಾದರೆ, ಇದು ದುರುದ್ದೇಶದಿಂದ ಕೂಡಿದೆ ಎಂದರ್ಥ.
1998ರಲ್ಲಿ3.16 ಎಕರೆಗೆ 3.24 ಲಕ್ಷ ರೂ. ಪರಿಹಾರ ನಿಗದಿ ಪಡಿಸಲಾಗಿತ್ತು, ಆದರೆ ಮುಖ್ಯಮಂತ್ರಿ ಅವರ ಪತ್ನಿಗೆ ಆ ಪರಿಹಾರ ನೀಡದೆ 14 ನಿವೇಶನ ನೀಡಲಾಗಿದೆ, ಅದರ ಮೌಲ್ಯ ಎಷ್ಟಿದೆ, ಸುಣ್ಣಕ್ಕೆ ಬೆಣ್ಣೆ ಬೆಲೆ ನೀಡುತ್ತಿದ್ದೀರಾ ಎಂದರು.