ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ಚಿತ್ರನಟ ದರ್ಶನ್ ಅವರ ನ್ಯಾಯಾಂಗಬಂಧನ ಅವಧಿಯನ್ನು ಸೆಪ್ಟೆಂಬರ್ 12 ರವರೆಗೆ ವಿಸ್ತರಿಸಲಾಗಿದೆ.
ನ್ಯಾಯಾಂಗ ಬಂಧನ ಅವಧಿ ಇಂದು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಬಂಧಿಸಿಟ್ಟಿರುವ ಕಾರಾಗೃಹಗಳಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಎಲ್ಲಾ ಆರೋಪಿಗಳ ಬಂಧನ ವಿಸ್ತರಣೆ
ನಟ ದರ್ಶನ್ ಅಲ್ಲದೆ, ಪ್ರಕರಣದ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನೂ ಸೆಪ್ಟೆಂಬರ್ 12 ರವರೆಗೆ ವಿಸ್ತರಿಸಿ, 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತು.
ನಟ ದರ್ಶನ್ ಬಳ್ಳಾರಿ ಜೈಲಿನಿಂದ, ಪವಿತ್ರಾಗೌಡ ಪರಪ್ಪನ ಅಗ್ರಹಾರ ಕಾರಾಗೃಹದಿಂದ, ಮೈಸೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರುಗಿ, ವಿಜಯಪುರ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಅವರು ಬಂಧನದಲ್ಲಿರುವ ಆಯಾ ಕಾರಾಗೃಹಗಳಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಎಲ್ಲ ಆರೋಪಿಗಳ ಹಾಜರಾತಿ ನಂತರ, ಆರೋಪಿಗಳ ಪರ ವಕೀಲರಿಗೆ ವೈಯಕ್ತಿಕವಾಗಿ ದೋಷಾರೋಪ ಪಟ್ಟಿ ಪ್ರತಿಗಳನ್ನು ನೀಡಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು.
ದೋಷಾರೋಪ ಪಟ್ಟಿ ಪ್ರತಿ
ಇದಕ್ಕೆ ನ್ಯಾಯಾಧೀಶರು ಸಮ್ಮತಿಸಿದಾಗ, ಮೊಕದ್ದಮೆಯ ಆರೋಪಿಗಳನ್ನು ಬೇರೆ ಬೇರೆಯಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇಡಲಾಗಿದೆ, ಆರೋಪಿಗಳ ಕೈಗೇ ದೋಷಾರೋಪ ಪಟ್ಟಿ ನೀಡುವುದರಿಂದ ಜಾಮೀನು ಪ್ರಕ್ರಿಯೆ ತಡವಾಗಲಿದೆ, ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದು, ಅವರ ಒಪ್ಪಿಗೆ ಮೇರೆಗೆ ಚಾರ್ಜ್‌ಶೀಟ್ ಪ್ರತಿಗಳನ್ನು ಅವರ ಪರ ವಕೀಲರಿಗೇ ನೀಡುವಂತೆ ಮನವಿ ಮಾಡಲಾಯಿತು.
ಈ ಹಂತದಲ್ಲಿ ಪ್ರಕರಣದ ಆರೋಪಿಗಳಾದ ಪುಟ್ಟಸ್ವಾಮಿ, ನಂದೀಶ್, ರಾಘವೇಂದ್ರ, ಜಗದೀಶ್, ಪವನ್, ಅನುಕುಮಾರ್, ಧನರಾಜ್, ರವಿಶಂಕರ್, ವಿನಯ್, ಪ್ರದೂಷ್, ನಾಗರಾಜು, ಲಕ್ಷ್ಮಣ್, ದೀಪಕ್ ಕುಮಾರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಪರ ವಕೀಲರ ಬಗ್ಗೆ ನ್ಯಾಯಾಧೀಶರು ವಿವರ ಪಡೆದರು.
ನ್ಯಾಯಾಲಯದಲ್ಲಿ ಹಾಜರಿದ್ದ ಎಸ್‌ಪಿಪಿ ಪ್ರಸನ್ನಕುಮಾರ್, ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳಾದ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಸೇರಿದಂತೆ ಒಟ್ಟು 60 ಡಿಜಿಟಲ್ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತಿರುವುದಾಗಿ ತಿಳಿಸಿದಾಗ, ತನಿಖಾಧಿಕಾರಿ ಎಸಿಪಿ ಚಂದನ್ ಪೆನ್ ಡ್ರೈವ್, ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್ ಕಂ ಪೆನ್ ಡ್ರೈವ್ ಸೇರಿದಂತೆ ಒಟ್ಟು 60 ಡಿಜಿಟಲ್ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿದರು.
ಎರಡು ದಿನಗಳಲ್ಲಿ ಪ್ರತಿ
ಆರೋಪಿಗಳಿಗೆ ನೀಡಬೇಕಿರುವ ದೋಷಾರೋಪ ಪಟ್ಟಿ ಪ್ರತಿಗಳನ್ನು ಎರಡು ದಿನಗಳಲ್ಲಿ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು.
ಪೇಪರ್ ದೋಷಾರೋಪ ಪಟ್ಟಿ ಪ್ರತಿಗಳನ್ನು ಇಂದೇ ನೀಡಿ, ಡಿಜಿಟಲ್ ಸಾಕ್ಷ್ಯಗಳ ಪ್ರತಿಯನ್ನು ಎರಡು ವಾರಗಳಲ್ಲಿ ನೀಡುವಂತೆ ನ್ಯಾಯಾಧೀಶರು ಸೂಚಿಸಿ, ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಈ ತಿಂಗಳ 12ರವರೆಗೆ ವಿಸ್ತರಿಸಿ ಆದೇಶ ನೀಡಿದರು.