ಬೆಂಗಳೂರು:ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿ ಖಾಲಿ ಇರುವ ಆಯುಕ್ತರ ಹುದ್ದೆಗಳಿಗೆ ನೇಮಕಗೊಳ್ಳಲು ಹೆಚ್ಚುತ್ತಿರುವ ಆಕಾಂಕ್ಷಿಗಳ ಒತ್ತಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಆಯೋಗದಲ್ಲಿ 10 ಹುದ್ದೆಗಳಿದ್ದು, ಮುಖ್ಯಆಯುಕ್ತರೂ ಸೇರಿದಂತೆ 8 ಸ್ಥಾನಗಳ ಭರ್ತಿಗೆ ಸರ್ಕಾರ ಮುಂದಾಗಿದೆ.
ಈಗಾಗಲೇ ಹುದ್ದೆ ಬಯಸಿ ಸರ್ಕಾರದ ಆಹ್ವಾನದ ಮೇರೆಗೆ 580 ಅರ್ಜಿಗಳು ಸಲ್ಲಿಕೆಯಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಮಟ್ಟದ ಸಭೆಯಲ್ಲಿ ಇವುಗಳ ಪರಿಶೀಲನೆ ನಡೆದಿದೆ.
ಬೃಹತ್ ಪ್ರಮಾಣದಲ್ಲಿ ಅರ್ಜಿ
ಬೃಹತ್ ಪ್ರಮಾಣದಲ್ಲಿ ಬಂದಿರುವ ಅರ್ಜಿಗಳ ಹಿನ್ನೆಲೆಯಲ್ಲಿ ಪ್ರತಿ ಆಯುಕ್ತರ ಹುದ್ದೆಗೆ 1:3 ಅನುಪಾತದಲ್ಲಿ ಪಟ್ಟಿ ತಯಾರಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ಅವರಿಗೆ ಹೊಣೆ ನೀಡಲಾಗಿತ್ತು.
ಈ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ, ಸೆಪ್ಟೆಂಬರ್ 5ರಂದು ಮತ್ತೆ ಸಭೆ ಸೇರಿ ಎಂಟು ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ತೀರ್ಮಾನಿಸಲಾಯಿತು.
ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ನೇಮಕಾತಿ ಬಯಸಿ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ಐನೂರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ, ಅರ್ಜಿಗಳನ್ನು ಪರಿಶೀಲಿಸಿ ಮಾಹಿತಿ ಹಕ್ಕು ಆಯಕ್ತರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಹಲವು ದಿನಗಳ ಹಿಂದೆಯೇ ಪೂರ್ಣವಾಗಬೇಕಿತ್ತು.
1:3 ಅನುಪಾತದ ಪಟ್ಟಿ
ಅಧಿಕಾರಿಗಳು ಸಿದ್ಧಪಡಿಸಿದ 1:3 ಅನುಪಾತದ ಪಟ್ಟಿಯನ್ನು ಪರಿಶೀಲಿಸಿ ಅರ್ಹರನ್ನು ಈ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಕಡತವನ್ನು ಪರಿಶೀಲಿಸಿ ಉನ್ನತ ಮಟ್ಟದ ಸಭೆಯ ಮುಂದಿಡಬೇಕಿತ್ತು.
ಆದರೆ ಇದೀಗ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ಪ್ರಭಾವ ಬೀರುತ್ತಿರುವವರನ್ನು ನೋಡಿ ಮುಖ್ಯಮಂತ್ರಿಗಳಿಗೆ ತಲೆನೋವು ಶುರುವಾಗಿದೆ.
ಮೂಲಗಳ ಪ್ರಕಾರ, ಈ ಹುದ್ದೆಗಳಿಗೆ ನೇಮಕ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಟೈಟ್ಲರ್, ಸಾಹಿತ್ಯ ಲೋಕದ ಮೇರು ಪ್ರಶಸ್ತಿ ಗಳಿಸಿರುವ ಸಾಹಿತಿಗಳು ಸೇರಿದಂತೆ ಹಲವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಅಲ್ಲದೆ, ಸಚಿವ ಸಂಪುಟದ ಕೆಲವು ಹಿರಿಯ ಸಹೋದ್ಯೋಗಿಗಳು, ಅರ್ಜಿ ಹಾಕಿರುವ ಅಭ್ಯರ್ಥಿಗಳನ್ನೇ ಮುಖ್ಯಮಂತ್ರಿ ಬಳಿ ಕರೆದೊಯ್ದು, ಇವರನ್ನು ನೇಮಕ ಮಾಡಲೇಬೇಕೆಂದು ಒತ್ತಡ ಹೇರಿದ್ದಾರೆ.
ಎಲ್ಲರೂ ಪ್ರಭಾವಿಗಳು
ಎಲ್ಲರೂ ಪ್ರಭಾವಿಗಳು, ಯಾರನ್ನೂ ಕಡೆಗಣಿಸಿ ನೇಮಕಾತಿ ಮಾಡಲು ಸಾಧ್ಯವಿಲ್ಲ, ಹಾಗೊಂದು ವೇಳೆ ನೇಮಕಾತಿ ಮಾಡಿದರೆ, ಕೆಲವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.
ಹಿಂದೆ ಯಾವ ಸರ್ಕಾರಿ ನೇಮಕಾತಿ ವಿಷಯದಲ್ಲೂ ಇಂತಹ ಒತ್ತಡ ನಿರ್ಮಾಣವಾಗಿರಲಿಲ್ಲ, ಮಾಹಿತಿ ಆಯುಕ್ತರ ನೇಮಕಾತಿಗೆ ಇಷ್ಟೊಂದು ಭಾರೀ ಒತ್ತಡ ಬಂದರೆ ಹೇಗೆ ಎಂದು ಮುಖ್ಯಮಂತ್ರಿ ಅವರು ಆ ಕಡತವನ್ನೇ ಮೂಲೆಗೆ ಹಾಕಿದ್ದಾರಂತೆ.
ವಾತಾವರಣ ತಿಳಿಯಾಗಿ ಎಲ್ಲರ ಗಮನ ಬೇರೆಡೆಗೆ ಹೋದ ನಂತರ ತುರ್ತು ಸಭೆ ನಡೆಸಿ ನೇಮಕಾತಿ ಮಾಡೋಣ ಅಲ್ಲಿಯವರೆಗೂ ಈ ಕಡತಗಳನ್ನು ನನ್ನ ಮುಂದೆ ತರಲೇಬೇಡಿ ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರಂತೆ.