ಬೆಂಗಳೂರು – ಮೈಸೂರು ನಡುವೆ ರೈಲುಗಳ ಹೆಚ್ಚಳ
ಬೆಂಗಳೂರು : ರಾಷ್ಟ್ರದ ವಿವಿಧೆಡೆಯಿಂದ ಬೆಂಗಳೂರಿಗೆ ಬರುವ ಪ್ರಮುಖ ರೈಲುಗಳನ್ನು ಮೈಸೂರುವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಬೆಂಗಳೂರು ಕೇಂದ್ರದಲ್ಲಿ ರೈಲುಗಳ ಆಗಮನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಿಲುಗಡೆಗೆ ಸ್ಥಳಾವಕಾಶ ಇಲ್ಲದ ಕಾರಣ ಇವುಗಳನ್ನು ಮೈಸೂರಿಗೆ ಹಾಗೂ ಕೆಲವು ರೈಲುಗಳ ಸಂಚಾರವನ್ನು ಚಾಮರಾಜನಗರದವರೆಗೆ ವಿಸ್ತರಿಸುವ ಯೋಜನೆ ಇಲಾಖೆಯದ್ದಾಗಿದೆ.
ಈ ಕಾರಣಕ್ಕಾಗಿ ಬೆಂಗಳೂರು-ಮೈಸೂರು ನಡುವೆ ಸಬ್-ಅರ್ಬನ್ ರೈಲು ಸಂಚಾರ ಯೋಜನೆ ಕೈಬಿಟ್ಟು, ಈ ಮಾರ್ಗದಲ್ಲಿ ನಾಲ್ಕು ಪಥಗಳ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಕಾರ್ಯ ಆರಂಭಗೊಂಡದೆ.
ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ರೈಲ್ವೆ ಯೋಜನೆಗಳ ಅನುಷ್ಠಾನ ಮತ್ತು ಸಬ್-ಅರ್ಬನ್ ರೈಲ್ವೆಗೆ ಸಂಬಂಧಿಸಿದಂತೆ ರಾಜ್ಯದ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿನ್ನೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಮಾಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಮತ್ತು ಅರಮನೆ ನಗರಗಳ ನಡುವೆ ನಾಲ್ಕು ಪಥಗಳ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಹಣವನ್ನು ತಾವು ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸುತ್ತೇನೆ. ಈಗಾಗಲೇ ರೈಲ್ವೆ ಇಲಾಖೆ ಈ ನಗರಗಳ ನಡುವೆ ಸಬ್-ಅರ್ಬನ್ ರೈಲು ಸಂಚಾರವನ್ನು ಕೈಬಿಟ್ಟು ನಾಲ್ಕು ಪಥಗಳ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಿ.
ರಾಜಧಾನಿಯಲ್ಲಿ ನಾಲ್ಕು ರೈಲು ನಿಲ್ದಾಣಗಳಿದ್ದರೂ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ. ಮೈಸೂರು ನಿಲ್ದಾಣವನ್ನು ಪ್ರಮುಖ ಕೇಂದ್ರವಾಗಿ ಮಾರ್ಪಡಿಸುವ ಅಗತ್ಯವಿದೆ.
ಈಗಾಗಲೇ ಅಲ್ಲಿ ರೈಲ್ವೆ ಕಾರ್ಯಾಗಾರ ಇದ್ದು ನಿಲ್ದಾಣಕ್ಕೆ ಇಟ್ಟಿಗೆಗೂಡು ಬಳಿ ಅಗತ್ಯವಿರುವ ಭೂಸ್ವಾಧೀನ ಮಾಡಿಕೊಳ್ಳುವಂತೆಯೂ ಸಚಿವರು ಸಲಹೆ ಮಾಡಿದ್ದಾರೆ.
ಬೆಂಗಳೂರು ಕೇಂದ್ರದಿಂದ 100 ಕಿಲೋ ಮೀಟರ್ ಮತ್ತು ಅದಕ್ಕೆ ಸಮೀಪದ ನಗರಗಳ ನಡುವಿನ ದ್ವಿಮಾರ್ಗಗಳನ್ನು ನಾಲ್ಕು ಪಥಗಳಾಗಿ ಪರಿವರ್ತಿಸಲು ಇಲಾಖೆ ತೀರ್ಮಾನಿಸಿದೆ.
ಈಗಾಗಲೇ ಮೈಸೂರು ಮತ್ತು ತುಮಕೂರು ನಡುವೆ ನಾಲ್ಕು ಪಥ ನಿರ್ಮಾಣಕ್ಕೆ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ. ಇನ್ನುಳಿದ ನಗರಗಳ ಸಮೀಕ್ಷೆ ಕಾರ್ಯಕ್ಕೂ ಚಾಲನೆ ನೀಡಲಾಗುವುದು.
ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ಸಬ್-ಅರ್ಬನ್ ಯೋಜನೆ ಕೈಬಿಡಿ. ಈಗಾಗಲೇ ಆ ಮಾರ್ಗದಲ್ಲಿ ಮೆಟ್ರೊ ಸಂಚಾರ ಇರುವುದರಿಂದ ಪರ್ಯಾಯವಾಗಿ ಬೆಂಗಳೂರು-ಮಾಗಡಿ-ಕುಣಿಗಲ್‌ಗೆ ಸಬ್-ಅರ್ಬನ್ ರೈಲು ಸಂಚಾರ ಯೋಜನೆ ರೂಪಿಸಿ.
ಇದರಿಂದ ಕೃಷಿಕನಿಗೂ ಹಾಗೂ ದಿನನಿತ್ಯ ಸಂಚರಿಸುವವರಿಗೂ ಅನುಕೂಲವಾಗಲಿದೆ ಹಾಗೂ ರಸ್ತೆ ಸಂಚಾರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದಿದ್ದಾರೆ.