ಎಲ್ಲರೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿ ಎನ್ನುತ್ತಿದ್ದಾರೆ
ಬೆಂಗಳೂರು : ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವುದರಲ್ಲಿ ಯಾವುದೇ ಸಂಶಯ ಬೇಡ ಎಂದಿರುವ ಸಿದ್ದರಾಮಯ್ಯ, ಬಿಜೆಪಿ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣಗಳಿಗೆ ಗತಿ ಕಾಣಿಸುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ಮುಖಂಡರ ರೀತಿ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ಆದರೆ, ಅವರ
ಆಡಳಿತಾವಧಿಯ 21 ಪ್ರಮುಖ ಹಗರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಖಚಿತ.
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹೀಗಾಗಿ ಯಾರು ಕುರ್ಚಿಗೆ ಆಸೆ ಪಡುತ್ತಿಲ್ಲ. ಕೆಲವು ಸಚಿವರು ಸೇರಿದಂತೆ ಪಕ್ಷದ ಮುಖಂಡರು ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಕುರ್ಚಿ ಖಾಲಿಯಾದರೆ ನಾವು ಅದಕ್ಕೆ ಅರ್ಹರಿದ್ದೇವೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದರು.
ಅದರಲ್ಲಿ ಏನೂ ತಪ್ಪಿಲ್ಲ. ಎಲ್ಲರಲ್ಲೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬ ಇಚ್ಛೆ ಇರುವಾಗ ಆಡಳಿತದಲ್ಲಿ ನಾನು ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಅರಣ್ಯ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದ 40 ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಸೇರಿದಂತೆ ಸಚಿವರು ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ.
ಅವರು ಮಾಡಿರುವ ಭ್ರಷ್ಟಾಚಾರದ ಪಟ್ಟಿಯನ್ನು ಸದನದಲ್ಲೇ ಬಿಡುಗಡೆ ಮಾಡಿದ್ದೇನೆ. ಅವುಗಳ ಬಗ್ಗೆ ಒಂದಲ್ಲ ಒಂದು ತನಿಖೆ ಆರಂಭಗೊಂಡಿದೆ.
ತನಿಖೆಯ ಪ್ರಗತಿ ಮತ್ತು ಅದಕ್ಕೆ ವೇಗ ಕೊಡುವ ಉದ್ದೇಶದಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವರ ಸಮಿತಿ ರಚಿಸಿದ್ದೇನೆ.
ಈ ಎಲ್ಲಾ ಹಗರಣಗಳ ತನಿಖೆಗೆ ತ್ವರಿತ ಚಾಲನೆ ನೀಡುವ ಉದ್ದೇಶದಿಂದಲೇ ಸಮಿತಿ ನೇಮಕ ಮಾಡಲಾಗಿದೆ. ಈ ಸಮಿತಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಗಡುವು ನೀಡಿದ್ದೇನೆ.
ಪಿಎಸ್ಐ ಹಗರಣ, 40% ಕಮಿಷನ್, ಕೋವಿಡ್-19, ಬಿಟ್ ಕಾಯಿನ್ ಹಗರಣಗಳ ಬಗ್ಗೆ ಎಸ್ಐಟಿ ಹಾಗೂ ಕೆಲವು ಆಯೋಗಗಳಿಂದ ತನಿಖೆ ನಡೆಯುತ್ತಿದೆ.
ಇವು ಸೇರಿದಂತೆ ಉಳಿದ ಹಗರಣಗಳ ಬಗ್ಗೆಯೂ ಸಮಿತಿ ಕೂಲಂಕುಶವಾಗಿ ಸಮಿತಿ ಪರಿಶೀಲನೆ ನಡೆಸಿ ಅವುಗಳಿಗೆ ಚುರುಕುಗೊಳಿಸಲು ಕ್ರಮ ಕೈಗೊಳ್ಳುವುದು. ತ್ವರಿತವಾಗಿ ತನಿಖೆ ಮುಗಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುತ್ತಾರೆ ಎಂದು ಅವರು ಹೇಳಿದರು.
ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಉದ್ದೇಶದಿಂದ ಸಮಿತಿ ರಚಿಸಲಾಗಿದೆಯೇ ಹೊರತು ಬಿಜೆಪಿ ವಿರುದ್ಧ ದ್ವೇಷ ರಾಜಕಾರಣ ಮಾಡಲು ಅಲ್ಲ. ಆದರೆ, ಅವರು ನನ್ನ ಬಗ್ಗೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಮಾತ್ರ ಅಂತಹ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಷ್ಟೇ ಅಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿದ್ವಷ ರಾಜಕಾರಣವನ್ನೇ ಮಾಡಿಕೊಂಡು ಬಂದಿದೆ. ದೆಹಲಿ,ತೆಲಂಗಾಣ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ತಮಗಾಗದವರ ವಿರುದ್ಧ ಕೇಂದ್ರ ತನಿಖಾ ತಂಡಗಳ ಮೂಲಕ ಹೆದುರಿಸಿ ಬೆದರಿಸುವ ಕೆಲಸ ಮಾಡಲಾಗುತ್ತಿದೆ.
ನಾವು ಇಂತಹ ಕೆಲಸ ಮಾಡಿಲ್ಲ. ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಶಿಕ್ಷೆ ಕೊಡಿಸಬಾರದೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಆ ಕಾರಣಕ್ಕಾಗಿಯೇ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು.