ಇದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆ.
ಈ ಸಂದರ್ಭದಲ್ಲಿ ಜನತಾ ಪಕ್ಷದ ರಾಷ್ಟ್ರೀಯ ನಾಯಕರಾದ ಸುಬ್ರಮಣಿಯನ್ ಸ್ವಾಮಿ ಅವರು ರಾಜ್ಯಕ್ಕೆ ಬರುತ್ತಾರೆ.
ತುಮಕೂರಿನಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಅವರು ಪಾಲ್ಗೊಳ್ಳಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್.ಡಿ.ದೇವೇಗೌಡರು ಅವರಿಗೆ ಜತೆ ಕೂಡುತ್ತಾರೆ.
ಅಷ್ಟೊತ್ತಿಗಾಗಲೇ ಹೆಗಡೆ ಮತ್ತು ದೇವೇಗೌಡರ ನಡುವೆ ದೊಡ್ಡ ಮಟ್ಟದ ಕದನ ನಡೆಯುತ್ತಿರುತ್ತದೆ ಮತ್ತು ತನ್ನ ತೀವ್ರತೆಯಿಂದಾಗಿ ಅದು ಪಕ್ಷದ ರಾಷ್ಟ್ರೀಯ ವರಿಷ್ಠರ ಗಮನ ಸೆಳೆದಿರುತ್ತದೆ.
ಹೀಗಾಗಿಯೇ ಕಾರಿನಲ್ಲಿ ತುಮಕೂರಿಗೆ ಹೋಗುತ್ತಿದ್ದಾಗ ಮಾತಿನ ನಡುವೆ ಸುಬ್ರಮಣಿಯನ್ ಸ್ವಾಮಿ ಅವರು ದೇವೇಗೌಡರ ಬಳಿ ಈ ಕುರಿತು ಪ್ರಸ್ತಾಪಿಸುತ್ತಾರೆ. ವಸ್ತುಸ್ಥಿತಿ ಎಂದರೆ ಅಷ್ಟೊತ್ತಿಗಾಗಲೇ ಹೆಗಡೆ ಹಾಗೂ ಸುಬ್ರಮಣಿಯನ್ ಸ್ವಾಮಿ ನಡುವಣ ಸಂಬಂಧವೂ ಹದಗೆಟ್ಟಿರುತ್ತದೆ.
ಹೀಗಾಗಿ ಗೌಡರೇ, ನಾನು ರಾಮಕೃಷ್ಣ ಹೆಗಡೆ ಅವರನ್ನು ದ್ವೇಷಿಸುತ್ತೇನೆ. ಅದೇನೂ ಹೊಸತಲ್ಲ. ಯಾವ್ಯಾವ ಕಾರಣಕ್ಕಾಗಿ ನಾನು ಹೆಗಡೆ ಅವರ ವಿರುದ್ಧ ನಿಂತಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ನೀವೇಕೆ ಹೆಗಡೆ ಅವರ ವಿರುದ್ಧ ತಿರುಗಿ ಬಿದ್ದಿದ್ದೀರಿ? ಎಂದು ಕೇಳುತ್ತಾರೆ.
ಅರೆಕ್ಷಣ ಸುಮ್ಮನಿರುವ ದೇವೇಗೌಡರು ನಂತರ ಅದನ್ನು ಎಳೆ ಎಳೆಯಾಗಿ ಹೇಳತೊಡಗುತ್ತಾರೆ.
ಸಾರ್, ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿದ ನಂತರ ನಾಯಕತ್ವಕ್ಕಾಗಿ ಪೈಪೋಟಿ ಶುರುವಾಯಿತು. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಿಂದ ಹೇಳಿಸಿ ಇಲ್ಲಿಗೆ ಬಂದವರು ರಾಮಕೃಷ್ಣ ಹೆಗಡೆ. ಅವರು ಮುಖ್ಯಮಂತ್ರಿಯಾಗುವುದರ ಹಿಂದೆ ನನ್ನ ತ್ಯಾಗವೂ ಇದೆ. ಮುಂದೆ ಅವರನ್ನು ಕನಕಪುರದ ಉಪಚುನಾವಣೆಯಲ್ಲಿ ಗೆಲ್ಲಿಸುವ ಸಲುವಾಗಿ ನಾನು ಮನೆ, ಮನೆ ಅಲೆದು ಕೆಲಸ ಮಾಡಿದೆ. ಆದರೆ ಅಷ್ಟೆಲ್ಲ ಮಾಡಿದರೂ ಹೆಗಡೆ ಅವರು ನನ್ನನ್ನು ದ್ವೇಷಿಸತೊಡಗಿದರು.
ಒಂದು ದಿನ ನಾನು ನನ್ನ ಕ್ಷೇತ್ರ ಹೊಳೆ ನರಸೀಪುರಕ್ಕೆ ಹೋಗಿದ್ದೆ. ಹೀಗೆ ಹೋದವನಿಗೆ ಅವತ್ತು ರಾತ್ರಿಯೇ ಒಂದು ಸಂದೇಶ ಬಂತು. ನಿವೇಶನಗಳ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ದ ಲೋಕಾಯುಕ್ತ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂಬುದು ಈ ಸಂದೇಶ.
ನನಗೆ ತುಂಬ ನೋವಾಯಿತು. ಕಡ್ಡಿಯನ್ನು ಗುಡ್ಡ ಮಾಡುವುದು ಬೇರೆ. ಆದರೆ ಕಡ್ಡಿಯೂ ಇಲ್ಲದೆ ಗುಡ್ಡ ತಂದು ಕೂರಿಸಲೆತ್ನಿಸುವುದು ಬೇರೆ. ಅರ್ಥಾತ್, ಹೆಗಡೆ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಬಯಸಿದ್ದಾರೆ ಎಂಬುದು ಖಚಿತವಾಗಿತ್ತು. ಹೀಗಾಗಿ ನಾನು ಕೆಲಸ ಮುಗಿಸಿದವನೇ ಹೊಳೆನರಸೀಪುರದಿಂದ ಬೆಂಗಳೂರಿಗೆ ಹೊರಟೆ. ಬರ,ಬರುತ್ತಲೇ ಮುಖ್ಯಮಂತ್ರಿಗಳ ಅವತ್ತಿನ ಕಾರ್ಯಕ್ರಮವೇನು?ಅನ್ನುವುದರ ವಿವರ ಪಡೆದೆ. ಅದರ ಪ್ರಕಾರ ಹೆಗಡೆ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿರುವುದು ನಿಗದಿಯಾಗಿತ್ತು.
ಹೀಗಾಗಿ ಹೊಳೆನರಸೀಪುರದಿಂದ ಬೆಂಗಳೂರಿಗೆ ಬಂದವನೇ ಸೀದಾ ಕುಮಾರಕೃಪಾ ಅತಿಥಿ ಗೃಹಕ್ಕೆ ಹೋದೆ. ಅವರಿದ್ದ ಕೊಠಡಿಯ ಮುಂದೆ ನಿಂತಾಗ ನಾನು ಹಿಂದಿನ ಸಂಪ್ರದಾಯದಂತೆ ನಡೆದುಕೊಳ್ಳಲಿಲ್ಲ. ಹಿಂದೆಲ್ಲ ಹೆಗಡೆ ಅವರಿದ್ದ ಕಡೆ ಹೋದರೆ ನಾನೇ ಬಾಗಿಲು ತಳ್ಳಿಕೊಂಡು ಒಳಗೆ ಹೋಗುವ ಪರಿಪಾಠ. ಆದರೆ, ಈಗ ನನ್ನ ವಿರುದ್ದವೇ ಲೋಕಾಯುಕ್ತ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಬಾಗಿಲು ತಳ್ಳಿಕೊಂಡು ಒಳಗೆ ಹೋಗುವುದು ನನಗೆ ಬೇಡ ಅನ್ನಿಸಿತು. ಹಾಗಂತಲೇ ಬಾಗಿಲಲ್ಲಿದ್ದ ಹೆಗಡೆ ಅವರ ಗನ್ ಮ್ಯಾನ್ ಗೆ ನಾನು ಬಂದ ವಿಷಯವನ್ನು ತಿಳಿಸುವಂತೆ ಹೇಳಿದೆ.
ನಿಜ ಹೇಳುತ್ತೇನೆ. ಅವತ್ತು ಅನುಭವಿಸಿದ ಮುಜುಗರವನ್ನು ನಾನು ಜೀವಮಾನದಲ್ಲಿ ಹಿಂದೆಂದೂ ಅನುಭವಿಸಿರಲಿಲ್ಲ. ಯಾಕೆಂದರೆ ಹೇಳಿ ಕಳಿಸಿ ತುಂಬಾ ಹೊತ್ತಾದರೂ ಹೆಗಡೆ ನನ್ನನ್ನು ಒಳಗೆ ಕರೆಯಲಿಲ್ಲ. ಕೊನೆಗೊಮ್ಮೆ ನಾನೇ ಆ ಗನ್ ಮ್ಯಾನ್ ಗೆ ಬಹುಶ: ಮರೆತಿರಬೇಕು ಅನ್ನಿಸುತ್ತದೆ. ಹೋಗಿ ಹೇಳಿ ಎಂದೆ. ಇದಾದ ಸ್ವಲ್ಪ ಹೊತ್ತಿಗೆ ಒಳಗೆ ಬರುವಂತೆ ನನಗೆ ಕರೆ ಬಂತು. ನಾನು ಒಳಗೆ ಹೋದ ಕೂಡಲೇ ಹೆಗಡೆ ಅವರು ಅಲ್ಲಿದ್ದವರನ್ನು ಹೊರಗೆ ಕಳಿಸಿದರು.
ನಾನು ನೇರವಾಗಿ ವಿಷಯ ಪ್ರಸ್ತಾಪಿಸಿದೆ. ಸಾರ್, ನನ್ನ ವಿರುದ್ಧ ಲೋಕಾಯಕ್ತ ತನಿಖೆ ನಡೆಸಲು ತೀರ್ಮಾನಿಸಿದ್ದೀರಿ. ನನಗೆ ನಿಜಕ್ಕೂ ತುಂಬಾ ನೋವಾಗಿದೆ. ಇಂತಹ ತೀರ್ಮಾನ ತೆಗೆದುಕೊಳ್ಳುವ ಮುನ್ನ ಯಾವುದಕ್ಕೂ ನನ್ನ ಬಳಿ ಒಂದು ಸಲ ಮಾತನಾಡಬಹುದಿತ್ತು ಎಂದೆ. ಆದರೆ, ಹೆಗಡೆ ಅವರು ಅದೊಂದು ದೊಡ್ಡ ವಿಷಯವೇ ಅಲ್ಲ ಎನ್ನುವಂತೆಯೇ, ಗೌಡ್ರೇ.. ಅದೇನು ದೊಡ್ಡ ವಿಷಯವಲ್ಲ? ಔಪಚಾರಿಕವಾಗಿ ತನಿಖೆ ಅಂತ ನಡೀತದೆ. ಕ್ಲೋಸ್ ಆಗತ್ತೆ. ಅದನ್ನು ನೋಡಿಕೊಳ್ಳೋಣ ಬಿಡಿ ಎಂದರು.
ಆದರೆ ಘಟನೆಯ ಬಗ್ಗೆ ನಿಜಕ್ಕೂ ನಾನು ನೊಂದಿದ್ದೆ. ಹೀಗಾಗಿ ನನ್ನ ಜೇಬಿನಲ್ಲಿದ್ದ ರಾಜೀನಾಮೆ ಪತ್ರವನ್ನು ತೆಗೆದು ಮಂತ್ರಿ ಸ್ಥಾನದಲ್ಲಿ ನಾನು ಮುಂದುವರಿಯಲು ಇಚ್ಚಿಸುವುದಿಲ್ಲ. ಹೀಗಾಗಿ ಈ ರಾಜೀನಾಮೆಯನ್ನು ಸ್ವೀಕರಿಸಿ ಎಂದೆ. ಆಗ ಹೆಗಡೆಯವರು ಕಾಲ ಮೇಲೆ ಕಾಲು ಹಾಕಿಕೊಂಡು ಗೌಡ್ರೇ, ಎರಡು ನಿಮಿಷ ನೀವೂ ಸುಮ್ಮನೆ ಕುಳಿತುಕೊಳ್ಳಿ. ನಾನೂ ಸುಮ್ಮನೆ ಕುಳಿತುಕೊಳ್ಳುತ್ತೇನೆ. ನಿಮ್ಮ ರಾಜೀನಾಮೆಯ ನಿರ್ಧಾರದ ಬಗ್ಗೆ ಮತ್ತೊಂದು ಸಲ ಯೋಚಿಸಿ ಎಂದರು.
ನಾನು ಸುಮ್ಮನೆ ಕುಳಿತೆ. ಮನಸ್ಸು ಕುದಿಯುತ್ತಿದೆ. ಅದರಲ್ಲೇ ಎದುರು ಕುಳಿತಿದ್ದ ಹೆಗಡೆ ಅವರನ್ನು ನೋಡಿದೆ. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತ ಅವರು ತಮ್ಮ ಪಾದಗಳನ್ನು ಅಲುಗಾಡಿಸುತ್ತಾ ನನ್ನನ್ನೇ ನೋಡುತ್ತಿದ್ದಾರೆ.
ಮೊದಲನೆಯದಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಒಂದು ತೀರ್ಮಾನ ಕೈಗೊಂಡಿದ್ದಾರೆ. ಇಲ್ಲಿಗೆ ಬಂದರೆ ಒಳಗೆ ಕರೆಯದೆ ಅವಮಾನ ಮಾಡಿದ್ದಾರೆ. ಸಾಲದು ಎಂಬಂತೆ ಅವರ ಪಾದ ಅಲ್ಲಾಡಿಸುವ ವರ್ತನೆ. ಒಬ್ಬ ನಾಯಕ ಮತ್ತೊಬ್ಬ ನಾಯಕನನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಅನ್ನಿಸಿ ಮನಸ್ಸು ಕುದ್ದು ಹೋಯಿತು.
ಹೀಗಾಗಿ ಆ ಕ್ಷಣದಲ್ಲೇ ನಾನು ನಿರ್ಧರಿಸಿದೆ. ಇವರು ನನ್ನನ್ನು ಮುಗಿಸಲು ನಿರ್ಧರಿಸಿದ್ದಾರೆ. ಇನ್ನು ಇವರ ವಿರುದ್ಧ ತಿರುಗಿ ಬೀಳದೆ ಇದ್ದರೆ ನನ್ನ ಕತೆ ಮುಗಿಸುತ್ತಾರೆ ಅಂತ ಮನಸ್ಸು ಸ್ಪಷ್ಟವಾಗಿ ಹೇಳಿತು. ಹೆಗಡೆ ಅವರ ವಿರುದ್ಧ ಸಂಘರ್ಷಕ್ಕಿಳಿಯಲು ನಾನು ಆ ಘಳಿಗೆಯಲ್ಲಿ ತೀರ್ಮಾನಿಸಿದೆ. ರಾಜೀನಾಮೆ ಪತ್ರವನ್ನು ವಾಪಸ್ ತೆಗೆದುಕೊಂಡೆ ಎಂದು ದೇವೇಗೌಡರು ಹೇಳಿದಾಗ ಸುಬ್ರಮಣಿಯನ್ ಸ್ವಾಮಿ ಮೌನವಾಗುತ್ತಾರೆ.
ದೇವೇಗೌಡರ ಹೋರಾಟ ಸಾಗರದಷ್ಟು
ದೇವೇಗೌಡರನ್ನು ಬಲ್ಲವರಿಗೆ ಅವರ ಮತ್ತು ಹೆಗಡೆ ಅವರ ನಡುವಣ ಸಂಘರ್ಷ ಯಾವ್ಯಾವ ಮಜಲುಗಳಿಗೆ ತಲುಪಿತು? ಅಂತಿಮವಾಗಿ ಏನಾಯಿತು? ಅನ್ನುವುದು ಗೊತ್ತಿರುತ್ತದೆ. ಆದರೆ ದೇವೇಗೌಡರು ಹೆಗಡೆ ವಿರುದ್ದ ಸಂಘರ್ಷಕ್ಕಿಳಿಯಲು ಯಾವ ಘಳಿಗೆಯಲ್ಲಿ ನಿರ್ಧರಿಸಿದರು ಎಂಬುದು ಬಹುತೇಕರಿಗೆ ಇನ್ನೂ ಗೊತ್ತಿಲ್ಲ. ವಾಸ್ತವವಾಗಿ ದೇವೇಗೌಡರು ದಿಲ್ಲಿ ಗದ್ದುಗೆಯತ್ತ ತಮ್ಮ ನಡಿಗೆ ಆರಂಭಿಸಿದ ಕ್ಷಣ ಅದು. ಇಂತಹ ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಇಪ್ಪತ್ತೇಳು ವರ್ಷಗಳು ಕಳೆದಿವೆ. ಅವರ ಬಗೆಗಿನ ಟೀಕೆಗಳೇನೇ ಇರಲಿ,ಆದರೆ ಅವರ ಆರು ದಶಕಗಳ ರಾಜಕೀಯ ಬದುಕಿನ ತುಂಬಾ ಹೋರಾಟಗಳ ನೆನಪೇ ಹೆಚ್ಚು.
ದೇಶದ ಮಹಾನ್ ಸಂತ ಕವಿಯೊಬ್ಬರು ಬರೆದ ದ್ವಿಪದಿಯೊಂದು ಹೀಗಿದೆ : ಸಂಸಾರದಲ್ಲಿ ಸುಖ ಸಾಸಿವೆಯಷ್ಟು. ದು:ಖ ಸಾಗರದಷ್ಟು. ಈ ಮಾತನ್ನು ದೇವೇಗೌಡರಿಗೆ ಅನ್ವಯಿಸಿ ಹೇಳುವುದಾದರೆ ದೇವೇಗೌಡರ ಬದುಕಿನಲ್ಲಿ ಅಧಿಕಾರ ಸಾಸಿವೆಯಷ್ಟು. ಹೋರಾಟ ಸಾಗರದಷ್ಟು.
ಬಹುಶ: ದೇಶದ ಪ್ರಧಾನಿ ಗದ್ದುಗೆಗೇರಿದ ಒಬ್ಬ ವ್ಯಕ್ತಿ ಇಷ್ಟು ಸುಧೀರ್ಘ ಕಾಲ ಹೋರಾಡಿದ ಇತಿಹಾಸ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಇತಿಹಾಸದಲ್ಲೇ ವಿರಳ.
ಅವರು ಪ್ರಧಾನಿ ಹುದ್ದೆಗೇರಿದ ಮೊದಲ ಕನ್ನಡಿಗ ಎಂಬುದು ಹೇಗೆ ಕನ್ನಡಿಗರೆಲ್ಲರಿಗೆ ಹೆಮ್ಮೆಯೋ?ಹಾಗೆಯೇ ಅವರು ಯಶಸ್ವಿಯಾಗಿ ಪ್ರಧಾನಿ ಹುದ್ದೆಯನ್ನು ನಿರ್ವಹಿಸಿದ್ದು ಈ ರಾಷ್ಟ್ರದ ರೈತರಿಗೂ ಆತ್ಮಗೌರವದ ಸಂಕೇತ.
ಇದನ್ನು ಹೇಳಲು ಒಂದು ಕಾರಣವಿದೆ. ಅದಕ್ಕಾಗಿ ನಾವು ದೇವೇಗೌಡರು ಪ್ರಧಾನಿಯಾಗುವ ಮುನ್ನ ಈ ದೇಶದಲ್ಲಿ ವ್ಯಾಪಕವಾಗಿದ್ದ ಒಂದು ಮಾತನ್ನು ಗಮನಿಸಬೇಕು. ಅದೆಂದರೆ, ಒಬ್ಬ ರೈತ ದೇಶದ ಪ್ರಧಾನಿಯಾಗಿ ಯಶಸ್ವಿ ಆಡಳಿತ ನೀಡಲಾರ ಎಂಬುದು. ಈ ಮಾತು ಬರಲು ಇದ್ದ ಕಾರಣವೆಂದರೆ ಚೌಧುರಿ ಚರಣ್ ಸಿಂಗ್ ಅವರ ವೈಫಲ್ಯ. ದೇಶದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತಲ್ಲ? ಈ ಸರ್ಕಾರ ಇಂದಿರಾಗಾಂಧಿ ಅವರ ಕೈ ಚಳಕದಿಂದ ಪದಚ್ಯುತವಾಯಿತು.
ಅದು ಬೀಳಲು ಚರಣ್ ಸಿಂಗ್ ಅವರ ನೆರವು ಪಡೆದ ಇಂದಿರಾಗಾಂಧಿ, ನಿಮ್ಮ ನೇತೃತ್ವದಲ್ಲಿ ಸರ್ಕಾರ ರಚಿಸಿ, ಕಾಂಗ್ರೆಸ್ ನಿಮಗೆ ಬೆಂಬಲ ನೀಡುತ್ತದೆ ಎಂದರು. ಆದರೆ ಪ್ರಧಾನಿ ಗದ್ದುಗೆಗೆ ಏರಿದ ಚರಣ್ ಸಿಂಗ್ ಅವರು ಬಹುಮತ ಸಾಬೀತುಪಡಿಸಬೇಕಾದ ಸಂದರ್ಭದಲ್ಲಿ ತಮ್ಮ ಮಾತಿನಿಂದ ಹಿಂದೆ ಸರಿದರು.
ಹೀಗೆ ಚರಣ್ ಸಿಂಗ್ ಅವರ ಅಲ್ಪಕಾಲೀನ ಸರ್ಕಾರ ಬಹುಮತ ಸಾಬೀತುಪಡಿಸಲಾಗದೆ ಪದಚ್ಯುತಗೊಂಡಾಗ ರೈತ ಈ ದೇಶದ ಪ್ರಧಾನಿಯಾಗಿ ಯಶಸ್ವಿ ಆಡಳಿತ ನೀಡುವುದು ಕಷ್ಟ ಎಂಬ ಮಾತು ಜನಜನಿತವಾಗುವಂತೆ ಪಟ್ಟಭದ್ರ ಹಿತಾಸಕ್ತಿಗಳು ನೋಡಿಕೊಂಡವು. ಆದರೆ ಪ್ರಧಾನಿ ಹುದ್ದೆಗೇರಿ ಹನ್ನೊಂದು ತಿಂಗಳ ಕಾಲ ಯಶಸ್ವಿ ಆಡಳಿತ ನೀಡಿದ ದೇವೇಗೌಡರು ಈ ಮಾತನ್ನು ಸುಳ್ಳು ಮಾಡಿದರು. ರೈತ ಈ ದೇಶವನ್ನು ಆಳಬಲ್ಲ ಎಂದು ತೋರಿಸಿದರು.
ಶ್ರೀಮಂತರ ಕಪಿಮುಷ್ಠಿಯಲ್ಲಿ ಭಾರತ : ದೇವೇಗೌಡರು ಬಡ ಭಾರತದ ಪ್ರತಿನಿಧಿ
ಅಂದ ಹಾಗೆ ದೇವೇಗೌಡರು ಪ್ರಧಾನಿ ಹುದ್ದೆಯಿಂದ ಏಕೆ ಬಹುಬೇಗ ಕೆಳಗಿಳಿದರು? ಎಂಬ ಪ್ರಶ್ನೆ ಕೇಳಿ ಬಂದಾಗ ಅವತ್ತು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಂ ಕೇಸರಿ ಅವರು ಕಣ್ಣ ಮುಂದೆ ಬರುತ್ತಾರೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕೇಸರಿ ಅವರಿಗಿದ್ದ ಅಪನಂಬಿಕೆ ದೇವೇಗೌಡರು ಕೆಳಗಿಳಿಯಲು ಕಾರಣವಾಯಿತು ಎಂಬ ಮಾತುಗಳು ಪ್ರಸ್ತಾಪವಾಗುತ್ತವೆ.
ಆದರೆ ಇದಕ್ಕೆ ಮತ್ತೊಂದು ಆಯಾಮವೂ ಇದೆ. ಇದನ್ನು ಗಮನಿಸುವ ಮುನ್ನ ಒಂದು ಮಾತನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದೆಂದರೆ,ಈ ದೇಶಕ್ಕೆ ಎರಡು ಮುಖಗಳಿವೆ. ಶ್ರೀಮಂತ ಭಾರತ ಒಂದು ಮುಖವಾದರೆ, ಬಡ ಭಾರತ ಮತ್ತೊಂದು ಮುಖ. ಕೆಲವೇ ಪ್ರಮಾಣದಷ್ಟು ಜನರಿರುವ ಶ್ರೀಮಂತ ಭಾರತ ಶೇಕಡಾ ತೊಂಭತ್ತಕ್ಕಿಂತ ಹೆಚ್ಚಿರುವ ಬಡಭಾರತವನ್ನು ಸದಾಕಾಲ ತನ್ನ ಮುಷ್ಟಿಯಲ್ಲಿಟ್ಟುಕೊಂಡೇ ಬಂದಿದೆ.
ಈ ಶ್ರೀಮಂತ ಭಾರತದ ಹಿಡಿತದಿಂದ ಬಡ ಭಾರತವನ್ನು ರಕ್ಷಿಸುವ ಸಲುವಾಗಿಯೇ ಹಲವಾರು ಮಹಾನುಭಾವರು ನಿರಂತರವಾಗಿ ಹೋರಾಡಿದ್ದಾರೆ. ಅದು ಯಶಸ್ವಿಯಾಗಿಲ್ಲ ಎಂಬುದು ವಿಪರ್ಯಾಸವಾದರೂ ಅಂತಹ ಹೋರಾಟ ಮಾತ್ರ ಸದಾ ಜಾರಿಯಲ್ಲಿದೆ. ಈ ವಿಷಯ ಬಂದಾಗ ದೇವೇಗೌಡರು ಬಡ ಭಾರತದ ಪ್ರತಿನಿಧಿ. ಇಂಥವರು ಯಶಸ್ವಿಯಾಗಿ ಬಹುಕಾಲ ಆಡಳಿತ ನಡೆಸುವುದನ್ನು ಶ್ರೀಮಂತ ಭಾರತ ಒಪ್ಪಲು ಸಾಧ್ಯವೇ ಇರಲಿಲ್ಲ.
ಹೀಗಾಗಿ ಅದು ದೇವೇಗೌಡರನ್ನು ಕೆಳಗೆ ಉರುಳಿಸಲು ಯತ್ನಿಸುತ್ತಲೇ ಇತ್ತು. ಸೀತಾರಾಂ ಕೇಸರಿ ಅವರ ಎಪಿಸೋಡು ಇದಕ್ಕೆ ನೆಪವಾಯಿತು. ಗಮನಿಸಬೇಕಾದ ಸಂಗತಿ ಎಂದರೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಮೇಲೆ ದೇವೇಗೌಡರು ಸೂಚ್ಯವಾಗಿ ಆಡಿದ ಒಂದು ಮಾತು.
ನಾನು ಪ್ರಧಾನಿಯಾಗಿರುವುದನ್ನು ದಿಲ್ಲಿಯ ಕ್ಲಬ್ ಹೌಸ್ ಸಹಿಸಲಿಲ್ಲ ಎಂಬುದು ಈ ಮಾತು. ಈ ಕ್ಲಬ್ ಹೌಸ್ ಬೇರೆ ಅಲ್ಲ, ಅದು ಶ್ರೀಮಂತ ಭಾರತದ ಸಂಕೇತ. ಈ ಶ್ರೀಮಂತ ಭಾರತದ ವಿರುದ್ದ ಹೋರಾಡಿ ಯಾರೂ ನಿರ್ಣಾಯಕ ಗೆಲುವು ಗಳಿಸಿಲ್ಲ.
ಆದರೆ ಹೋರಾಡಿದವರೆಲ್ಲರೂ,ಇಂತಹ ಹೋರಾಟ ನಿರಂತರವಾಗಿ ನಡೆಯಲು ಸ್ಪೂರ್ತಿಯಾಗಿದ್ದಾರೆ. ದೇವೇಗೌಡರೂ ಇಂತಹ ಸ್ಪೂರ್ತಿ ಎಂದು ಗುರುತಿಸುವುದೇ ಈ ಹಂತದಲ್ಲಿ ನಾವು ಅವರಿಗೆ ಕೊಡುವ ಅತಿ ದೊಡ್ಡ ಗೌರವ.
ದೇವೇಗೌಡರ ಬಗ್ಗೆ ಮಾಧ್ಯಮಗಳಲ್ಲಿ ಟೀಕೆ, ಟಿಪ್ಪಣಿ ಮಾಡುವುದು ಬೇರೆ. ಆದೇನೇ ಇದ್ದರೂ ಇತಿಹಾಸದಲ್ಲಿ ಅವರಿಗೆ ಗೌರವದ ಜಾಗ ದಕ್ಕಲೇಬೇಕು ಎಂಬುದನ್ನು ಮರೆಯಬಾರದು. ನನಗನ್ನಿಸುವ ಪ್ರಕಾರ ಭಾರತವನ್ನು ಗ್ರಹಿಸಲು ಇಬ್ಬರು ವಿಶಿಷ್ಟ ವ್ಯಕ್ತಿಗಳನ್ನು ಕಸಿ ಮಾಡಬೇಕು. ಈ ಪೈಕಿ ಒಬ್ಬರು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ, ಮತ್ತೊಬ್ಬರು ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ.
ಲೋಹಿಯಾರ ಚಿಂತನೆ, ದೇವೇಗೌಡರ ಹೋರಾಟದ ಸ್ವರೂಪಗಳನ್ನು ಕಸಿ ಮಾಡಿದರೆ ಈ ದೇಶವನ್ನು ಗ್ರಹಿಸಲು ಅಗತ್ಯವಾದ ಒಂದು ದಾರಿ ಕಣ್ಣೆದುರು ನಿಲ್ಲುತ್ತದೆ ಎಂಬುದು ನನ್ನನಿಸಿಕೆ. ಈ ಬಗ್ಗೆ ಚರ್ಚೆಯಾಗಲಿ.
ಆರ್.ಟಿ.ವಿಠ್ಠಲಮೂರ್ತಿ