ಬೆಂಗಳೂರು:ಮಂಡ್ಯ ಜಿಲ್ಲೆ ನಾಗಮಂಗಲದ ಘಟನೆ ತನಿಖೆಯನ್ನು ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಐಎ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಕ್ಕೆ ಬರಲಿದೆ, ನಾಗಮಂಗಲದ ಘಟನೆಯಿಂದ ಹಿಂದೂಗಳಿಗೆ ಅಪಮಾನವಾಗಿದೆ, ಗಣಪತಿ ಮೆರವಣಿಗೆ ಮೇಲೆ ಚಪ್ಪಲಿ ಮತ್ತು ಕಲ್ಲು ತೂರಾಟ ನಡೆಸಿದ್ದಾರೆ, ಅಲ್ಲದೆ, ಹಿಂದೂಗಳ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದರು.
ಇದು ಚಿಕ್ಕ ಘಟನೆಯೇ
ಇಷ್ಟೆಲ್ಲಾ ನಡೆದರೂ ಜಿಲ್ಲಾ ಸಚಿವರು ಹಾಗೂ ಗೃಹ ಸಚಿವರು ಇದೊಂದು ಚಿಕ್ಕ ಘಟನೆ ಎಂದಿದ್ದಾರೆ, ಇನ್ನು ಎಂತಹ ದುರಂತ ನಡೆಯಬೇಕಿತ್ತು, ಹಿಂದೂಗಳ ೨೫ ಅಂಗಡಿ ಸುಟ್ಟಿರುವುದು ಚಿಕ್ಕ ಘಟನೆಯಾಗಿ ಕಂಡರೆ, ದೊಡ್ಡ ಘಟನೆ ಏನಾಗಬೇಕಾಗಿತ್ತು ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳಿಗೆ ಅಪಮಾನ ಮಾಡುವಂಥದ್ದು ನಡೆಯುತ್ತಿದೆ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಇಂಥ ಕೆಲಸ ಮಾಡುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ.
ಮುಖ್ಯಮಂತ್ರಿ ಹಾಗೂ ಸಚಿವರ ಮೇಲೆ ಭ್ರಷ್ಟಾಚಾರದ ದೂರುಗಳಿವೆ, ಅದನ್ನು ಮುಚ್ಚಿ ಹಾಕಲು ಗಲಭೆ ಮಾಡಿಸುತ್ತಿದ್ದೀರಾ ಎಂದರು.