ಬೆಂಗಳೂರು:ಬಿಜೆಪಿ ಆಡಳಿತದಲ್ಲಿ ನಡೆದಿರುವ ಹಗರಣಗಳ ತನಿಖೆ ಪೂರ್ಣಗೊಳಿಸಿ ಎರಡರಿಂದ ನಾಲ್ಕು ವಾರದೊಳಗೆ ಆರೋಪ ಪಟ್ಟಿ ಸಲ್ಲಿಸುವಂತೆ ಪೋಲಿಸ್ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸರ್ಕಾರ ಆದೇಶ ಮಾಡಿದೆ.
ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅಧಿಕಾರಾವಧಿಯಲ್ಲಿ ನಡೆದಿರುವ 21 ಹಗರಣಗಳಿಗೆ ಸಂಬಂಂಧಿಸಿದಂತೆ ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ತನಿಖಾ ಪ್ರಗತಿ ಪರಿಶೀಲಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಸಚಿವರ ಸಮಿತಿ ಈ ಸೂಚನೆ ನೀಡಿದೆ.
ಹಗರಣಗಳ ಪರಿಶೀಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಎರಡು ದಿನಗಳ ಹಿಂದಷ್ಟೇ ಹಗರಣಗಳ ತನಿಖಾ ಪ್ರಗತಿ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆಗೆ ನೇಮಕಗೊಂಡಿದ್ದ ಸಚಿವರ ಸಮಿತಿ ಇಂದು ಸಭೆ ಸೇರಿ ಎಲ್ಲಾ ವಿಷಯಗಳಿಗೆ ಸಂಬಂಂಧಿಸಿದಂತೆ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದರೂ ಇದುವರೆಗೆ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣ ಪಡೆಯಲಾಯಿತು.
ಮುಖ್ಯಮಂತ್ರಿಗಳು ಈಗಾಗಲೇ ಹೇಳಿರುವಂತೆ 21 ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ನಿಮ್ಮಲ್ಲಿ ದಾಖಲೆಗಳಿರುತ್ತವೆ, ಇಷ್ಟಿದ್ದರೂ ಯಾರ ವಿರುದ್ಧವೂ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ.
ಎಫ್‌ಐಆರ್ ದಾಖಲಿಸಿ
ನಮಗೆ ತಿಳಿದಿರುವಂತೆ ಕೆಲವು ವಿಷಯಗಳಲ್ಲಿ ತನಿಖೆ ಮುಗಿದಿದ್ದರೆ ನೀವೇ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಿ.
ಕೆಲವು ಹಗರಣಗಳ ವಿಷಯದಲ್ಲಿ ಸರ್ಕಾರದ ಅನುಮತಿ ಬೇಕಿದ್ದರೆ, ಸಂಪುಟದ ಮುಂದಿಡಿ, ಇನ್ನು ವಿಳಂಬ ಮಾಡಬೇಡಿ ಎಂದು ಸೂಚಿಸಿದ್ದಾರೆ.
ಮುಖ್ಯಮಂತ್ರಿ ಅವರು ನಮ್ಮ ಸಮಿತಿಗೆ ಎರಡು ತಿಂಗಳ ಗಡುವು ನೀಡಿದ್ದಾರೆ, ನಾವು ನಿಮಗೆ ಎರಡರಿಂದ ನಾಲ್ಕು ವಾರಗಳಲ್ಲಿ ಕೆಲವು ಹಗರಣಗಳಿಗೆ ಮೋಕ್ಷ ದೊರಕಿಸಲು ಸಮಯಾವಕಾಶ ನೀಡುತ್ತೇವೆ.
ಮುಂದೆ ನ್ಯಾಯಾಲಯ ತೀರ್ಮಾನ
ಯಾರು ಎಷ್ಟೇ ದೊಡ್ಡವರಿರಲಿ, ತಪ್ಪು ಮಾಡಿದ್ದರೆ ಅವರನ್ನು ಕಾನೂನು ಚೌಕಟ್ಟಿಗೆ ತನ್ನಿ ಮುಂದೆ ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತೆ.
ಬಿಜೆಪಿ ಆಡಳಿತದಲ್ಲಿ ನಡೆದ ಶೇಕಡ 40% ಕಮಿಷನ್ ಸೇರಿದಂತೆ ಕೆಲವು ಹಗರಣಗಳನ್ನು ಮುಂದಿಟ್ಟುಕೊಂಡು ನಾವು ಅಧಿಕಾರಕ್ಕೆ ಬಂದಿದ್ದೇವೆ, ಈಗಾಗಲೇ ಸರ್ಕಾರ ತನಿಖೆಗೆ ಆದೇಶ ಮಾಡಿದೆ.
ದೇವರಾಜ ಅರಸ್ ಟ್ರಕ್ ಟರ್ಮಿನಲ್ ಭ್ರಷ್ಟಾಚಾರ ಹೊರತುಪಡಿಸಿ ಯಾವುದೇ ತನಿಖೆ ಪೂರ್ಣಗೊಳಿಸಿದ ಮಾಹಿತಿ ಇಲ್ಲ ಎಂದು ತಿಳಿಸಿದ ಗೃಹ ಸಚಿವರು, ಸಂಬಂಧಿಸಿದಂತೆ ಪ್ರತಿಯೊಂದು ಹಗರಣಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ತ್ವರಿತ ನಿರ್ಧಾರ ಕೈಗೊಳ್ಳಿ
ಅದರಲ್ಲೂ ಕೋವಿಡ್-19 ಸಂದರ್ಭದ ಭ್ರಷ್ಟಾಚಾರ, ನೀರಾವರಿ ಮತ್ತು ಲೋಕೋಪಯೋಗಿ ಸೇರಿದಂತೆ ಶೇಕಡ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ತ್ವರಿತ ನಿರ್ಧಾರ ಕೈಗೊಳ್ಳಿ ಎಂದು ಸಭೆ ಸೂಚಿಸಿತು.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ಮಾದರಿಯಲ್ಲೇ ಬೋವಿ ಸೇರಿದಂತೆ ವಿವಿಧ ನಿಗಮಗಳಲ್ಲೂ ಭಾರೀ ಭ್ರಷ್ಟಾಚಾರ ನಡೆದಿದೆ, ಅವುಗಳಿಗೆ ಸಂಬಂಧಿಸಿದಂತೆ ಯಾವ ಹಂತದಲ್ಲಿ ತನಿಖೆ ನಡೆದಿದೆ ಎಂದು ಮಾಹಿತಿ ಪಡೆದ ಸಚಿವರ ಸಮಿತಿ, ಇವುಗಳಲ್ಲಿ ಕೆಲವು ಹಗರಣಗಳ ಬಗ್ಗೆ ಇನ್ನು ಎರಡು ವಾರಗಳಲ್ಲಿ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ಮಾಡಿತು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನ ಹಂಚಿಕೆ ಹಗರಣಗಳಿಂದ ಆಡಳಿತದ ವರ್ಚಸ್ಸಿಗೆ ಉಂಟಾಗಿರುವ ಧಕ್ಕೆ ಉಪಶಮನಕ್ಕೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ಹಗರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಆ ಪಕ್ಷದ ಮುಖಂಡರಿಗೆ ಬಿಸಿ ಮುಟ್ಟಿಸಲು ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ.
ನ್ಯಾಯಾಲಯ ತೀರ್ಪಿಗೆ ಮುನ್ನ
ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಸಂಬಂಧ ನ್ಯಾಯಾಲಯದ ತೀರ್ಪು ಹೊರಬರುವ ಮುನ್ನವೇ ಒಂದೆರಡು ಹಗರಣಗಳನ್ನು ಬಯಲು ಮಾಡಿ, ಬಿಜೆಪಿ ಜನಪ್ರತಿನಿಧಿಗಳ ಬಣ್ಣ ಬಯಲು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಇದರ ಬೆನ್ನಲ್ಲೇ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ಸಚಿವರ ಸಮಿತಿ ಸಭೆ ಸೇರಿ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಂಡಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ಹಾಜರಿದ್ದರು.