ಬೆಂಗಳೂರು:ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ ರಾಜಣ್ಣ, ಮುಂದಿನ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕೋ ಅವರನ್ನು ಗೆಲ್ಲಿಸುತ್ತೇನೆ, ಯಾರನ್ನು ಸೋಲಿಸಬೇಕೋ ಅವರನ್ನು ಸೋಲಿಸುತ್ತೇನೆ, ಅಷ್ಟೇ ನನ್ನ ಮುಂದಿನ ರಾಜಕೀಯ ಎಂದರು.
ಸಿದ್ದರಾಮಯ್ಯ ಇರುವವರೆಗೂ ಸಚಿವ
ಸಿದ್ದರಾಮಯ್ಯ ಇರುವವರೆಗೂ ಸಚಿವನಾಗಿ ಮುಂದುವರೆಯುತ್ತೇನೆ, ನಂತರ ಅದಕ್ಕೂ ಗುಡ್‌ಬೈ ಹೇಳುವುದಾಗಿ ತಿಳಿಸಿದ್ದಾರೆ.
ಸಕ್ರಿಯ ರಾಜಕಾರಣದಲ್ಲಿ ಹಲವು ವರ್ಷಗಳಿಂದ ದುಡಿದಿದ್ದೇನೆ, ಸೋತಿದ್ದೇನೆ, ಗೆದ್ದಿದ್ದೇನೆ, ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ, ಇನ್ನು ನನಗೆ ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಇಲ್ಲ.
ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾದ ದಿನದಿಂದಲೂ, ಒಂದಲ್ಲಾ ಒಂದು ಹೇಳಿಕೆಗೆ ಸದಾ ವಿವಾದದಲ್ಲೇ ಇರುತ್ತಿದ್ದ ರಾಜಣ್ಣ ಅವರ ರಾಜಕೀಯ ನಿವೃತ್ತಿ ಘೋಷಣೆ ಕೆಲವರಿಗೆ ಅಚ್ಚರಿ ಮೂಡಿಸಿದೆ.
ಸಿದ್ದರಾಮಯ್ಯ ಪೂರ್ಣಾವಧಿ
ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಪೂರ್ಣಾವಧಿಗೆ ಇರುತ್ತಾರೆ, ಒಂದು ವೇಳೆ ಅವರು ಅಧಿಕಾರದಿಂದ ಕೆಳಗಿಳಿದರೆ, ಗೃಹ ಸಚಿವ ಡಾ.ಪರಮೇಶ್ವರ್ ಇಲ್ಲವೇ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದರು.
ಇಂತಹ ಹೇಳಿಕೆಗಳೂ ಸೇರಿದಂತೆ ಸರ್ಕಾರ ಮತ್ತು ಪಕ್ಷವನ್ನು ಪದೇ ಪದೇ ಇಕ್ಕಟ್ಟಿಗೆ ಸಿಲುಕಿಸಿ ಸಿದ್ದರಾಮಯ್ಯ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇವರ ಮಾತಿಗೆ ಬ್ರೇಕ್ ಹಾಕಲು ಕೆಲವೊಮ್ಮೆ ವರಿಷ್ಠರೇ ಮಧ್ಯೆ ಪ್ರವೇಶಿಸಬೇಕಾಗುತ್ತಿತ್ತು. ಇಂತಹ ಹೇಳಿಕೆಗಳಿಂದ ರಾಜಣ್ಣ ದೂರ ಸರಿದಿದ್ದು ಇದೀಗ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದಾರೆ.