ಬೆಂಗಳೂರು:ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿಷಯದಲ್ಲಿ ನ್ಯಾಯಾಲಯದಿಂದ ಯಾವುದೇ ತೀರ್ಪು ಬರಲಿ ನಾನು ಅಧಿಕಾರದಿಂದ ಕೆಳಗಿಳಿಯುವುದಿಲ್ಲ, ಧೃತಿಗೆಡದೆ ನಿಮ್ಮ ಕೆಲಸದಲ್ಲಿ ಮುಂದುವರೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರಿಗೆ ಅಭಯ ನೀಡಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ನಾವು ಅಧಿಕಾರದಲ್ಲಿ ಇರುವುದನ್ನು ಸಹಿಸುತ್ತಿಲ್ಲ, ನಾನೇನೂ ಬ್ರಹ್ಮಾಂಡ ತಪ್ಪು ಮಾಡಿಲ್ಲ, ನನಗೂ ಕಾನೂನಿನ ಇತಿಮಿತಿ ಗೊತ್ತಿದೆ, ನಾನು ಯಾವುದೇ ಲಾಭಕ್ಕೆ ಅಧಿಕಾರ ಬಳಕೆ ಮಾಡಿಲ್ಲ.
ಅಧಿಕಾರ ತ್ಯಜಿಸುವುದಿಲ್ಲ
ಪ್ರತಿಪಕ್ಷಗಳ ರಾಜಕೀಯವನ್ನು ಎದುರಿಸುತ್ತೇನೆ, ಹೈಕೋರ್ಟ್‌ನ ತೀರ್ಪು ಒಂದು ವೇಳೆ ತಮ್ಮ ವಿರುದ್ಧವಾದರೂ ಕಾನೂನು ಹೋರಾಟ ನಡೆಸುತ್ತೇನೆಯೇ ಹೊರತು ಅಧಿಕಾರ ತ್ಯಜಿಸುವುದಿಲ್ಲ ಎಂದಿದ್ದಾರೆ.
ತಮ್ಮ ಆಪ್ತ ಸಚಿವರ ನಿವಾಸದಲ್ಲಿ ಈ ಮಾತುಗಳನ್ನು ಆಡಿರುವ ಮುಖ್ಯಮಂತ್ರಿ ಅವರು, ನಾವು ಮತ್ತು ನಮ್ಮ ಸರ್ಕಾರ ಗಟ್ಟಿಯಾಗಿದ್ದೇವೆ ಎಂಬುದನ್ನು ಜನರಿಗೆ ತೋರಿಸಲು ರಾಜ್ಯಾದ್ಯಂತ ಜನಸ್ಪಂದನಾ ಬೃಹತ್ ಸಭೆಗಳನ್ನು ಮಾಡೋಣ ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದಿದ್ದಾರೆ.
ಇದೇ ಕಾರಣಕ್ಕೆ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದು, ಇದೇ 30ರಂದು ಕಲಬುರಗಿಯಿಂದಲೇ ಮೊದಲ ಜನಸ್ಪಂದನಾ ಕಾರ್ಯಕ್ರಮ ಆರಂಭವಾಗಲಿ.
ಸರ್ಕಾರ ಜನರಿಗೆ ಸ್ಪಂದಿಸುತ್ತದೆ
ನಂತರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸಭೆಗಳನ್ನು ನಡೆಸಿ ಸರ್ಕಾರ ಯಾವ ಒತ್ತಡಕ್ಕೂ ಸಿಲುಕದೆ, ಜನರಿಗೆ ಸ್ಪಂದಿಸುತ್ತದೆ ಎಂಬುದನ್ನು ತೋರಿಸೋಣ.
ಇನ್ನು ಮೂರು-ನಾಲ್ಕು ದಿನದಲ್ಲಿ ಖಾಲಿ ಇರುವ ಎಲ್ಲಾ ನಿಗಮ-ಮಂಡಳಿಗಳಿಗೆ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತೇನೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ಸಮಿತಿ ಪಕ್ಷದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಿಗಷ್ಟೇ ಅಲ್ಲದೆ, ಸದಸ್ಯರ ನೇಮಕಕ್ಕೂ ಪ್ರಾಥಮಿಕ ವರದಿ ಮತ್ತು ಪಟ್ಟಿ ನೀಡಿದೆ.
ಕಾರ್ಯಕರ್ತರಿಗೆ ಅಧಿಕಾರ ನೀಡುವ ಮೂಲಕ ಅವರನ್ನೂ ಹುರಿದುಂಬಿಸಿ ಪಕ್ಷ ಮತ್ತು ಸರ್ಕಾರ ಭದ್ರವಾಗಿದೆ ಎಂಬುದನ್ನು ತೋರಿಸೋಣ.
ಭ್ರಮೆಯಲ್ಲೇ ಇರಲಿ
ಬಿಜೆಪಿಯವರು ಜೆಡಿಎಸ್ ಜೊತೆ ಕೈಜೋಡಿಸಿಕೊಂಡು ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರೆ ಸರ್ಕಾರ ಪತನಗೊಳ್ಳುತ್ತದೆ ಎಂಬ ಭ್ರಮೆಯಲ್ಲಿದ್ದಾರೆ, ಅವರು ಭ್ರಮೆಯಲ್ಲೇ ಇರಲಿ, ನಾವು ದಿಟ್ಟ ನಿರ್ಧಾರ ಕೈಗೊಂಡು ಅಧಿಕಾರ ನಡೆಸೋಣ, ಎಲ್ಲರೂ ಒಟ್ಟಾಗಿರೋಣ.
ನಮ್ಮ 60 ಶಾಸಕರನ್ನು ಒಟ್ಟುಗೂಡಿಸಿ ಆಪರೇಷನ್ ಕಮಲ ಮಾಡುವುದು ಅಸಾಧ್ಯದ ಮಾತು, ಅದು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ನನ್ನ ಮೇಲೆ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ.
ಇಂತಹ ಷಡ್ಯಂತ್ರಗಳಿಗೆ ನಾವು ಮಣಿಯಲು ಸಾಧ್ಯವೇ ಎಂದಿರುವ ಮುಖ್ಯಮಂತ್ರಿ ಅವರು, ನೀವು ಯಾವುದೇ ಹಿಂಜರಿಕೆ ಇಲ್ಲದೆ ಕೆಲಸ ಮಾಡಿ, ನಾನೇ ಪೂರ್ಣಾವಧಿಗೆ ಇರುತ್ತೇನೆ, ದಿವಂಗತ ದೇವರಾಜ ಅರಸರ ದಾಖಲೆಯನ್ನೂ ಮೀರಿಸೋಣ ಎಂದರು.