ಬೆಂಗಳೂರು:ಜಾತಿ ನಿಂದನೆ ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತ ಪಕ್ಷದ ಒಕ್ಕಲಿಗ ಸಮುದಾಯದ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಬೆರಳೆಣಿಕೆಯಷ್ಟೇ ಸದಸ್ಯರು ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿದರು.
ಕೆಲವು ಸಚಿವರು ಗೈರು
ಪ್ರಭಾವೀ ಮಾಜಿ ಸಂಸದರ ಸಲಹೆ ಮೇರೆಗೆ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದೆ, ಆಡಳಿತ ಪಕ್ಷದಲ್ಲಿ ಈ ಸಮುದಾಯದ 40ಕ್ಕೂ ಹೆಚ್ಚು ಶಾಸಕರಿದ್ದಾರೆ, ಆದರೆ, ಚಲುವರಾಯ ಸ್ವಾಮಿ ಹಾಗೂ ಡಾ.ಸುಧಾಕರ್ ಅವರನ್ನು ಹೊರತುಪಡಿಸಿ ಉಳಿದ ಸಚಿವರು ನಿಯೋಗದಲ್ಲಿ ಇರಲಿಲ್ಲ.
ನಲವತ್ತಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದರೂ ಇಬ್ಬರು ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ 8 ಮಂದಿಯಷ್ಟೇ ಹಾಜರಿದ್ದರು.
ಮುಖ್ಯಮಂತ್ರಿ ಭೇಟಿಗೆ ನಿಯೋಗದಲ್ಲಿ ತೆರಳುವಂತೆ ಪ್ರಭಾವಿಗಳು ಮನವಿ ಮಾಡಿದರೂ ಸಚಿವರಾದ ಕೃಷ್ಣಬೈರೇಗೌಡ, ರಾಮಲಿಂಗಾ ರೆಡ್ಡಿ, ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್ ಸೇರಿದಂತೆ ಉಳಿದ ಯಾವುದೇ ಸದಸ್ಯರು ಇರಲಿಲ್ಲ.
ಡಿ.ಕೆ.ಶಿವಕುಮಾರ್ ಇರಲಿಲ್ಲ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂಜಾನೆಯಷ್ಟೇ ವಿದೇಶದಿಂದ ಹಿಂತಿರುಗಿದ್ದರಿಂದ ನಿಯೋಗದಲ್ಲಿ ತೆರಳಲು ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಚಲುವರಾಯಸ್ವಾಮಿ ಹಾಗೂ ಡಾ.ಸುಧಾಕರ್, ಜಾತಿ ನಿಂದನೆ ಮಾಡಿರುವ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಎಸ್‌ಐಟಿ ಇಲ್ಲವೇ ಲೋಕಾಯುಕ್ತಕ್ಕೆ ಪ್ರಕರಣವನ್ನು ವಹಿಸುವಂತೆ ನಾವು ಮಾಡಿದ ಮನವಿಗೆ ಮುಖ್ಯಮಂತ್ರಿ ಅವರು ಸ್ಪಂದಿಸಿದ್ದಾರೆ ಎಂದರು.
ಅವಹೇಳನಕಾರಿ ಮಾತುಗಳು
ಒಕ್ಕಲಿಗ ಹಾಗೂ ಎಸ್‌ಸಿ ಸಮುದಾಯದ ಬಗ್ಗೆ ಮಾತನಾಡಿದ್ದಾರೆ, ಈಗಾಗಲೇ ಅವರು ಪೋಲಿಸ್ ವಶದಲ್ಲಿದ್ದಾರೆ, ಈ ಹಿಂದೆ ಸಹಾ ಬಹಳಷ್ಟು ಸಮುದಾಯಗಳ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ, ಅಷ್ಟೇ ಅಲ್ಲ, ಸ್ವಾಮೀಜಿಗಳ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದಾರೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದೇವೆ.
ಮುನಿರತ್ನ ವಿರುದ್ಧ ಲೋಕಾಯುಕ್ತದಲ್ಲೂ ಪ್ರಕರಣಗಳು ದಾಖಲಾಗಿವೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ ಮೊಕದ್ದಮೆ ಹೂಡಲಾಗಿದೆ, ಧೈರ್ಯ ಮಾಡಿದ್ದರಿಂದ ಇಂತಹ ದೊಡ್ಡ ಪ್ರಕರಣ ಬಯಲಾಗಿದೆ, ಅವರಿಗೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷಿಗಳು ಹೊರಬರಲಿವೆ.
ಆಡಿಯೊ ಈಗಾಗಲೇ ಬಯಲಾಗಿದೆ, ಮುನಿರತ್ನ ಎಲ್ಲಾ ವಿದ್ಯೆ ಕರಗತ ಮಾಡಿಕೊಂಡವರು, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದರು.