ಬೆಂಗಳೂರು:ವಿಶ್ವಕರ್ಮ ಯೋಜನೆಯಡಿ ಈ ತಿಂಗಳ 20ರಂದು ದೇಶದ 20 ಲಕ್ಷ ವಿಶ್ವಕರ್ಮ ಸಮುದಾಯದವರಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಇಂದು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಮತ್ತು ವಿಶ್ವಕರ್ಮ ಜಯಂತಿ ಸಂದರ್ಭದಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಚಿತ್ರಕಲಾ ಪ್ರದರ್ಶಿನಿಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಅನೇಕ ಯೋಜನೆ ಜಾರಿ
ಗುಜರಾತ್ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ 25 ವರ್ಷಗಳಿಂದ ಮೋದಿ ಅವರು, ಬಡವರಿಗಾಗಿ ಸೇವೆ ಮಾಡಿದ್ದಾರೆ, ಮಹಿಳೆಯರ ಘನತೆ ಹೆಚ್ಚಿಸಲು ಶೌಚಾಲಯ ನಿರ್ಮಾಣ, ಅಡುಗೆ ಅನಿಲ ಉಚಿತ ಸಂಪರ್ಕ, ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ ಮತ್ತು ಯುವಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ದೇಶದಲ್ಲಿ ಇರುವುದು ರೈತರು, ಮಹಿಳೆಯರು, ಯುವಜನರು ಮತ್ತು ಬಡವರು ಎಂಬ ನಾಲ್ಕು ಜಾತಿಗಳು ಮಾತ್ರ ಎಂಬುದು ಪ್ರಧಾನಿ ಅವರ ಪ್ರತಿಪಾದನೆಯಾಗಿದ್ದು, ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬಡವರನ್ನು ವ್ಯವಸ್ಥೆಯ ಜೊತೆ ಜೋಡಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದು, ದೇಶ ಮೊದಲು ಎಂಬ ತತ್ವದೊಂದಿಗೆ ನಿಂತರವಾಗಿ ಕೆಲಸ ಮಾಡಿದವರು ಎಂದರು.