ಬೆಂಗಳೂರು:ತಿರುಪತಿ ಲಡ್ಡು ಪ್ರಕರಣದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮುಜರಾಯಿ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಯಲ್ಲಿ ಕೆಎಂಎಫ್ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸುವಂತೆ ಆದೇಶಿಸಿದೆ.
ರಾಜ್ಯದಲ್ಲಿ ಮೂವತ್ನಾಲ್ಕು ಸಾವಿರ ಮುಜರಾಯಿ ದೇವಾಲಯಗಳಿದ್ದು ಅವುಗಳಲ್ಲಿ 205 ಎ ವರ್ಗದಡಿ, 193 ಬಿ ವರ್ಗದಲ್ಲಿವೆ, ಉಳಿದವು ಸಿ ವರ್ಗದಲ್ಲಿದ್ದು ಈ ದೇವಾಲಯಗಳಲ್ಲಿ ಪೂಜೆ ನಂತರ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ.
ಕರ್ನಾಟಕದ ದೇವಾಲಯಗಳಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮಿಶ್ರಿತ ಪ್ರಸಾದ ಹಂಚಿದ ಘಟನೆಗಳು ನಡೆದಿಲ್ಲ.
ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನ
ಆದರೂ, ಸಾರ್ವಜನಿಕ ಹಿತದೃಷ್ಟಿಯಿಂದ ನಮ್ಮ ದೇವಾಲಯಗಳ ಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಇಲಾಖೆ ತೀರ್ಮಾನಿಸಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ನೀಡುವ ಪ್ರಸಾದದ ಬಗ್ಗೆಯೂ ಎಚ್ಚರ ವಹಿಸುವಂತೆ ಸಲಹೆ ಮಾಡಿದ್ದರು.
ಅಷ್ಟೇ ಅಲ್ಲ, ಈ ಬಗ್ಗೆ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆಗೆ ಒಳಪಡಿಸುವಂತೆಯೂ ಸೂಚಿಸಿದ್ದರು.
ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆ
ಲಡ್ಡು ಪ್ರಸಾದದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆ ಆರಂಭಗೊಂಡ ನಂತರ, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಸಾದ ತಯಾರಿಕೆ ಬಗ್ಗೆ ಮಾಹಿತಿ ಪಡೆದರು.
ಯಾವ ದೇವಸ್ಥಾನಗಳಲ್ಲಿ ಪೂಜೆ ನಂತರ ಪ್ರಸಾದ ನೀಡುತ್ತಾರೋ, ಅಂತಹ ಎಲ್ಲಾ ಕಡೆಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಬೇಕು ಮತ್ತು ಆಗಿಂದಾಗ್ಯೆ ಪ್ರಸಾದದ ಗುಣಮಟ್ಟವನ್ನು ತಿಳಿಯಲು ಪ್ರಯೋಗಾಲಯಕ್ಕೆ ತಪಾಸಣೆಗೆ ಕಳುಹಿಸಬೇಕು ಎಂದು ಆದೇಶಿಸಿದ್ದಾರೆ.
ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಬರುವ ದೇವಾಲಯಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಪ್ರಸಾದ ವಿನಿಯೋಗ ಮತ್ತು ಮಾರಾಟವಾಗುತ್ತಿದೆ.
ಇಂತಹ ದೇವಾಲಯಗಳಲ್ಲಿ ಯಾವುದೇ ಲೋಪ ಬರದಂತೆ ಸಂಬಂಧಪಟ್ಟ ಆಡಳಿತಾಧಿಕಾರಿಗಳು ಮುಂಜಾಗ್ರತೆ ವಹಿಸುವಂತೆಯೂ ಆದೇಶಿಸಿದ್ದಾರೆ.