ಬೆಂಗಳೂರು:ಅತ್ಯಾಚಾರ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ಅವರನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಇಂದು ಹಾಜರುಪಡಿಸಲಾಗಿತ್ತು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ.ಎಂ.ಶಿವಕುಮಾರ್ ಅವರು, ಆರೋಪಿಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.
ಮಹಿಳೆ ದೂರಿನ ಹಿನ್ನೆಲೆ ಸೆರೆ
ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಕಗ್ಗಲಿಪುರ ಪೋಲಿಸ್ ಠಾಣೆಯಲ್ಲಿ ನೀಡಿದ್ದ ದೂರಿನ ಅನುಸಾರ ಮುನಿರತ್ನ ಅವರನ್ನು ಶುಕ್ರವಾರ ಬೆಳಗ್ಗೆ ಜೈಲಿನ ಆವರಣದಲ್ಲೇ ಬಂಧಿಸಿದ್ದರು.
ನ್ಯಾಯಲಯದಲ್ಲಿ ಮುನಿರತ್ನ ಪರ ವಕೀಲರು ಈ ಪ್ರಕರಣದಲ್ಲಿ ಸುದ್ದಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಆರೋಪಿಸಿದರು.
ನಮ್ಮ ಕಕ್ಷಿದಾರರ ವಿರುದ್ಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಮುನ್ನವೇ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಳ್ಳುತ್ತಿತ್ತು.
ಮಾಧ್ಯಮದವರ ತನಿಖೆ
ಪ್ರಕರಣವನ್ನು ಮಾಧ್ಯಮದವರು ತನಿಖೆ ಮಾಡುತ್ತಿದ್ದಾರೋ ಅಥವಾ ಪೋಲಿಸರೋ ಎಂದು ಗೊತ್ತಾಗುತ್ತಿಲ್ಲ, ಇದರ ಬಗ್ಗೆ ದೂರು ದಾಖಲಿಸಿಕೊಳ್ಳಿ ಎಂದಾಗ, ಈ ಬಗ್ಗೆ ದೂರು ನೀಡಿ ಎಂದು ನ್ಯಾಯಾಧೀಶರು ಸೂಚಿಸಿದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಆರೋಪಿ ಮುನಿರತ್ನ, ತಮಗೆ ಎರಡು ನಿಮಿಷ ಮಾತನಾಡಲು ಅವಕಾಶ ನೀಡುವಂತೆ ಕೋರಿದರು.
ದೂರು ನೀಡಿದವರು, ನನ್ನ ಜೊತೆಯಲ್ಲೇ ಇದ್ದವರು, ನನ್ನನ್ನು ಒಂದು ಪ್ರಕರಣದಲ್ಲಿ ಬಂಧಿಸಿ ಬಿಡುಗಡೆಗೊಳ್ಳುತ್ತಿದ್ದಂತೆ ಮತ್ತೊಂದು ದೂರು ದಾಖಲಿಸಿದ್ದಾರೆ, ಇದು ರಾಜಕೀಯ ಷಡ್ಯಂತ್ರ.
ಲೋಕಸಭಾ ಚುನಾವಣೆ ನಂತರ ಕೆಲವರು ಈ ರೀತಿ ತೊಂದರೆ ಕೊಡುತ್ತಿದ್ದಾರೆ, ಇದರಿಂದ ಬೇಸರಗೊಂಡಿದ್ದೇನೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದರು.
ಇದಕ್ಕೆ ನ್ಯಾಯಾಧೀಶರು, ರಾಜೀನಾಮೆಯನ್ನು ಎಲ್ಲಿ ಕೊಡಬೇಕೋ ಅಲ್ಲಿ ಕೊಡಿ, ಇಲ್ಲಿ ಪ್ರಸ್ತಾಪಿಸುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿ, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.