ಬೆಂಗಳೂರು:ಸಂಚಾರಿ ನಿಯಮ ಪಾಲಿಸದವರ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಚಾಲನಾ ಪರವಾನಗಿ ರದ್ದು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಾರಿಗೆ ಸಚಿವರಿಗೆ ಸೂಚಿಸಿದರು.
ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದರೆ ಅಪಘಾತಗಳಾಗದೆ ಇರುತ್ತದೆಯೇ, ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ, ನಿಮ್ಮ ಕುಟುಂಬಕ್ಕೆ ನೀವೇ ಜವಾಬ್ದಾರಿ, ಆದ್ದರಿಂದ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದರು.
ಕುಟುಂಬವನ್ನು ಅನಾಥ ಮಾಡಬೇಡಿ
ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು ಸಂಭವಿಸುವುದಿಲ್ಲ, ಮದ್ಯಪಾನ ಮಾಡಿ ವಾಹನ ಓಡಿಸುವುದನ್ನು ನಿಲ್ಲಿಸಿ, ನಿಮ್ಮ ಕುಟುಂಬಗಳನ್ನು ಅನಾಥ ಮಾಡಬೇಡಿ ಎಂದು ಜನತೆಗೆ ಮುಖ್ಯಮಂತ್ರಿ ಕರೆ ನೀಡಿದರು.
ಆಧುನಿಕ ಜೀವ ರಕ್ಷಕ ಸವಲತ್ತುಗಳ 65 ಆಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಪಘಾತ ಸಂದರ್ಭದಲ್ಲಿ ಗೋಲ್ಡರ್ ಅವರ್ ಬಹಳ ಮುಖ್ಯ, ಈ ಒಂದು ಗಂಟೆಯಲ್ಲಿ ಅಗತ್ಯ ತುರ್ತು ಚಿಕಿತ್ಸೆ ದೊರೆತರೆ ನೂರಾರು ಪ್ರಾಣಗಳನ್ನು ಉಳಿಸಲು ಸಾಧ್ಯವಿದೆ, ಪ್ರಾಣ ಉಳಿಸುವ ಕಾರ್ಯಕ್ಕೆ ಆಂಬುಲೆನ್ಸ್‌ಗಳು ನೆರವಾಗುತ್ತವೆ ಎಂದರು.
ಪ್ರಸ್ತುತ 65 ಆಧುನಿಕ ಮತ್ತು ಪ್ರಾಥಮಿಕ ಸೌಲಭ್ಯಗಳ ಆಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಆಧುನಿಕ ಸವಲತ್ತುಗಳ ಆಂಬುಲೆನ್ಸ್‌ಗಳನ್ನು ವಿಸ್ತರಿಸಲಾಗುವುದು ಎಂದರು.
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷುಲ್ಲಕ ವಿಚಾರಗಳ ಬಗ್ಗೆ ರಾಜ್ಯಪಾಲರು ಉತ್ತರ ಕೇಳುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದಿಂದ ರಾಜಭವನಕ್ಕೆ ಕಳುಹಿಸುವ ಪತ್ರಗಳಿಗೆ ಇಂಗ್ಲೀಷ್‌ನಲ್ಲೇ ಸಹಿ ಇರಬೇಕೆಂದು ಆಕ್ಷೇಪ ವ್ಯಕ್ತಪಡಿಸುವುದು ಮತ್ತು ಉತ್ತರ ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಕನ್ನಡದಲ್ಲಿರುವ ಪತ್ರಗಳಿಗೆ ಕನ್ನಡದಲ್ಲೂ, ಇಂಗ್ಲೀಷ್‌ನಲ್ಲಿರುವ ಪತ್ರಗಳಿಗೆ ಇಂಗ್ಲೀಷ್‌ನಲ್ಲಿ ಸಹಿ ಮಾಡುವುದು ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಪಾಲರು ಅರ್ಕಾವತಿ ರೀ-ಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೆದಿರುವ ಪತ್ರದ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿಯವರು ಹಿಂದೆ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಈ ವಿಷಯವನ್ನು ವಿಧಾನಸಭೆಯಲ್ಲಿ ಏಕೆ ಪ್ರಸ್ತಾಪಿಸಲಿಲ್ಲ.
ರೀ-ಡೂ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತದಲ್ಲಿ ಸಚಿವರಾಗಿದ್ದ ಸಿ.ಟಿ.ರವಿ ಅಂದು ಏನೂ ಕ್ರಮಕೈಗೊಳ್ಳದೆ, ಈಗ ರಾಜ್ಯಪಾಲರಿಗೆ ದೂರು ಕೊಡುವ ಉದ್ದೇಶವೇನು ಎಂದು ಪ್ರಶ್ನಿಸಿದರು.