ಬೆಂಗಳೂರು:ಹಿಂದೂ ಧಾರ್ಮಿಕ ಆಚರಣೆ, ಹಿಂದೂ ಸಂಪ್ರದಾಯಗಳು ಗಂಗಾರತಿ, ಕಾವೇರಿ ಆರತಿ ಬಿಜೆಪಿಯವರ ಗುತ್ತಿಗೆ ಅಲ್ಲ ಎಂದು ಕಾವೇರಿ ಆರತಿ ಸಮಿತಿ ಅಧ್ಯಕ್ಷ, ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎನ್.ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಸಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅನಾದಿ ಕಾಲದಿಂದ ನಮ್ಮ ಪೂರ್ವಜರು ಸಂಪ್ರದಾಯ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ, ವಾರಾಣಸಿ, ಹರಿದ್ವಾರದಲ್ಲಿ ಈ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದಿದ್ದಾರೆ.
ಬಿಜೆಪಿ ಬಂದ ಮೇಲೆ ಬಂದಿಲ್ಲ
ಬಿಜೆಪಿ, ಹಿಂದೂ ಮಹಾಸಭಾದಂತಹ ಸಂಘಟನೆಗಳು ಹುಟ್ಟುವುದಕ್ಕೂ ಮೊದಲೇ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ, ಈ ಮೊದಲು ಗಂಗಾರತಿ, ಅಯೋಧ್ಯೆಯೂ ಇತ್ತು, ಇವೆಲ್ಲವೂ ಬಿಜೆಪಿ ಬಂದ ಮೇಲೆ ಬಂದಿದ್ದಲ್ಲ, ಸಂಪ್ರದಾಯ, ಧಾರ್ಮಿಕ ಆಚರಣೆಗಳು ಬಿಜೆಪಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರ ಗುತ್ತಿಗೆ ಅಲ್ಲ.
ಕಾಂಗ್ರೆಸ್ ಎಲ್ಲ ಪರಂಪರೆ ಮುಂದುವರಿಸಿಕೊಂಡು ಬರುತ್ತಿರುವುದಕ್ಕೆ ಬಿಜೆಪಿಯವರು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಧಾರ್ಮಿಕ ಆಚರಣೆ ನೆಪದಲ್ಲಿ ಕಿಡಿಗೇಡಿ ಕೆಲಸ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿ, ಯಾರ ಸರ್ಕಾರವೇ ಇರಲಿ, ಕಾನೂನು ಬಾಹಿರ ಘಟನೆಗಳು ನಡೆದಾಗ ಕ್ರಮ ತೆಗೆದುಕೊಳ್ಳಲಾಗುತ್ತದೆ.
ನೆಲದ ಕಾನೂನಿಗೆ ಗೌರವ
ಗಣೇಶ ಕಾರ್ಯಕ್ರಮವಾಗಲಿ ಅಥವಾ ಇನ್ಯಾವುದೇ ಕಾರ್ಯಕ್ರಮಗಳಾಗಲಿ, ನೆಲದ ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ, ಅದನ್ನು ಪಾಲನೆ ಮಾಡಲಾಗಿದೆ ವ್ಯಂಗ್ಯವಾಡುವುದು ಮಾಜಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಅಶೋಕ್ ಅವರಿಗೆ ಶೋಭೆ ತರುವುದಿಲ್ಲ.
ಗಂಗಾರತಿ, ದಸರಾ ಆಚರಣೆ, ಜಾತ್ರೆ ಸಮಾರಂಭಗಳನ್ನೂ ಬಿಜೆಪಿಯವರು ತಮ್ಮ ಸ್ವತ್ತು ಎಂಬಂತೆ ನೋಡುತ್ತಾರೆ, ಇದು ನೆಲದ ವಾಸಿಗಳ ಹಕ್ಕು, ಉತ್ತರ ಭಾರತದಲ್ಲಿ ಮಾಡುತ್ತಿರುವುದನ್ನು ದಕ್ಷಿಣ ಭಾರತದಲ್ಲೂ ವ್ಯವಸ್ಥಿತವಾಗಿ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ.
ಕಾವೇರಿ ಆರತಿ ಕಾರ್ಯಕ್ರಮವನ್ನು ಅಶೋಕ್ ಅವರು ಅಭಿನಂದಿಸುತ್ತಾರೆ, ಪ್ರಶಂಸಿಸುತ್ತಾರೆ ಎಂದು ಭಾವಿಸಿದ್ದೆವು, ಆದರೆ ಅವರು ಟೀಕೆ ಮಾಡುತ್ತಾರೆ ಎಂದರೆ ಅವರಿಗಿರುವ ಕಾಳಜಿ ತೋರುತ್ತದೆ.
ರಾಜಕೀಯ ಬಣ್ಣ ಲೇಪನ
ಬಿಜೆಪಿಯವರ ಈ ವರ್ತನೆ ಗಮನಿಸಿದರೆ, ಧಾರ್ಮಿಕ ವಿರೋಧಿಗಳು ಎಂಬತ್ತಾಗುತ್ತದೆ, ಎಲ್ಲ ವಿಷಯಕ್ಕೂ ರಾಜಕೀಯ ಬಣ್ಣ ಲೇಪನ ಮಾಡುತ್ತಾರೆ.
ಇದು ಕೀಳುಮಟ್ಟದ ಮನಸ್ಥಿತಿ, ಕೇವಲ ಘೋಷಣೆ ಕೂಗಿದರೆ, ಕೇಸರಿ ಶಾಲು ಹಾಕಿಕೊಂಡರೆ, ಮೆರವಣಿಗೆ ಮಾಡಿದರೆ ಹಿಂದುತ್ವ ಅಲ್ಲ, ವ್ಯವಸ್ಥಿತವಾಗಿ ಆಚರಣೆ ಮಾಡುವ ಮೂಲಕ ಧಾರ್ಮಿಕ ಆಚರಣೆ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ಮುಖ್ಯ.
ಈ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ, ಇದನ್ನು ಅಭಿನಂದಿಸುವ ಕೆಲಸ ಮೊದಲು ಮಾಡಿ, ನಿಜವಾದ ಸಂಸ್ಕಾರವಂತರಾದರೆ ಬೆಂಬಲಿಸಬೇಕಿತ್ತು, ಸಂಸ್ಕಾರ ಇದ್ದಂತೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.