ಬೆಂಗಳೂರು:ಸಿದ್ದರಾಮಯ್ಯ ಸಂಪುಟದ ಮಂತ್ರಿಗಳಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಅವರಿಗೂ ವಿವರಣೆ ಕೋರಿ ರಾಜಭವನ ನೋಟಿಸ್ ನೀಡಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಅವರು ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಹಗರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಆಗಸ್ಟ್ 27ರಂದು ರಾಜ್ಯಪಾಲರನ್ನು ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಿರುವುದಲ್ಲದೆ, ಸಚಿವದ್ವಯರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.
ರಾಜ್ಯಪಾಲರಿಗೆ ದೂರು
ಇದಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ, ಸಚಿವ ಎಂ.ಬಿ.ಪಾಟೀಲ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿದ್ದರು.
ಈ ದೂರುಗಳನ್ನು ರಾಜಭವನ ಪರಿಶೀಲಿಸಿ, ಕಾನೂನು ಸಲಹೆ ಪಡೆದ ನಂತರ ಸರ್ಕಾರದಿಂದ ವಿವರಣೆ ಕೋರಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಕೈಗಾರಿಕಾ ಸಚಿವರೂ ಆಗಿರುವ ಎಂ.ಬಿ.ಪಾಟೀಲ್, ಕೆಐಎಡಿಬಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ, ಮೂಲೆ ಹಾಗೂ ಬಿಡಿ ನಿವೇಶನಗಳನ್ನು ಹರಾಜು ಪ್ರಕ್ರಿಯೆ ಮೂಲಕ ಹಂಚಬೇಕು.
ಕಾನೂನು ಉಲ್ಲಂಘನೆ
ಈ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲೇ ನಡೆಯಬೇಕು, ಆದರೆ, ಇವರು ಎಲ್ಲಾ ಕಾನೂನನ್ನು ಗಾಳಿಗೆ ತೂರಿ, ತಮ್ಮ ಆಪ್ತರು ಹಾಗೂ ರಾಜಕಾರಣಿಗಳ ಮಕ್ಕಳಿಗೆ ಹಂಚಿದ್ದಾರೆ ಎಂದು ಕೆಲವು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು.
ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ, ಇದರಿಂದ ಕೆಐಎಡಿಬಿಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ ಎಂದು ದೂರಿದ್ದರು.
ಇವರು ಕ್ರಿಮಿನಲ್ ಅಪರಾಧ ಎಸಗಿದ್ದಾರೆ, ಆದ್ದರಿಂದ ಭ್ರಷ್ಟಚಾರ ನಿಗ್ರಹ ಕಾಯಿದೆ ಸೆಕ್ಷನ್ 17 ಮತ್ತು 19ರಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಜಾಗ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು, ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ.
ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಕುಟುಂಬದ ಸಂಸ್ಥೆಗೆ ಬೆಲೆ ಬಾಳುವ ಜಮೀನು ಕೊಡಿಸಿದ್ದಾರೆ ಎಂದು ನಾರಾಯಣಸ್ವಾಮಿ ದೂರಿದ್ದರು.
ಸಿಎ ಸೈಟು ಪಡೆಯಲು ಕಾನೂನು ಕ್ರಮಗಳಿವೆ, ಸಾಮಾಜಿಕ ಚಟುವಟಿಕೆ, ರಂಗಮಂದಿರ, ಆಸ್ಪತ್ರೆ ಸೇರಿದಂತೆ ನಿಗದಿತ ಉದ್ದೇಶಕ್ಕೆ ಇವನ್ನು ಮೀಸಲಾಗಿ ಇಡಲಾಗುತ್ತದೆ.
ಸಾಮಾನ್ಯ ಜನರು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿ ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗಿದೆ, ಇದರಿಂದ ಅನುಮಾನಗಳು ಸೃಷ್ಟಿಯಾಗಿವೆ.
ಏರೋಸ್ಪೇಸ್ ನಿವೇಶನ ಪಡೆದಿದ್ದಾರೆ
ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಕಲಬುರಗಿಯಲ್ಲಿ ನೋಂದಣಿಯಾಗಿದೆ, ಇದೊಂದು ಧಾರ್ಮಿಕ ಟ್ರಸ್ಟ್, ಆದರೆ, ಏರೋಸ್ಪೇಸ್‌ಗೆ ಸಂಬಂಧಿಸಿದ ನಿವೇಶನ ಪಡೆದಿದ್ದಾರೆ ಎಂದು ದೂರು ದಾಖಲಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಉಭಯ ಸಚಿವರುಗಳು ಸುದ್ದಿಗೋಷ್ಠಿಯಲ್ಲಿ ಪ್ರತ್ಯೇಕವಾಗಿ ವಿವರಣೆ ನೀಡಿ, ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದ್ದಲ್ಲದೆ, ನಿಯಮಾನುಸಾರವೇ ಅರ್ಹರಿಗೆ ನಿವೇಶನಗಳನ್ನು ನೀಡಲಾಗಿದೆ ಹಾಗೂ ಸಂಸ್ಥೆ ಪಡೆದುಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದರು.