ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿ ನಿರ್ಧಾರವನ್ನು ಎತ್ತಿಹಿಡಿದಿದೆ.
ರಾಜಭವನದ ನಿರ್ಧಾರ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಮುಡಾ ವಿವಾದ ಕುರಿತ ವಿಚಾರಣೆಗೆ ಅನುಮತಿ ನೀಡಿದಂತಾಗಿದೆ.
ಕಾಯ್ದಿರಿಸಿದ್ದ ತೀರ್ಪು ಪ್ರಕಟ
ಮುಖ್ಯಮಂತ್ರಿ ಅವರ ರಿಟ್ ಅರ್ಜಿ ಮೇಲೆ ಆರು ದಿನಗಳ ವಾದ-ಪ್ರತಿವಾದವನ್ನು ಸೆ.12ರಂದು ಮುಗಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಪೀಠ ಇಂದು ಪ್ರಕಟಿಸಿತು.
ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರುದಾರರು ಅನುಮತಿ ಕೋರಿದ್ದರೂ, ರಾಜ್ಯಪಾಲರು ಸಂವಿಧಾನದ ವಿಧಿ 17ಎ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಸರಿಯಾಗಿದೆ.
ಸಚಿವ ಸಂಪುಟದ ಶಿಫಾರಸ್ಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಕಾನೂನು ಬದ್ಧವಾಗಿದ್ದು, ಅವರು ವಿವೇಚನೆ ಬಳಿಸಿದ್ದಾರೆ ಎಂದು ಹೇಳುವ ಮೂಲಕ ಹೈಕೋರ್ಟ್, ರಿಟ್ ಅರ್ಜಿಯನ್ನು ವಜಾಗೊಳಿಸಿತು.
ರಾಜ್ಯಪಾಲರ ಕ್ರಮ ಸೂಕ್ತವಾಗಿದೆ
ಮುಖ್ಯಮಂತ್ರಿ ಅವರ ಕುಟುಂಬ ಫಲಾನುಭವಿಗಳಾಗಿದೆ, ರಾಜ್ಯಪಾಲರ ಕ್ರಮ ಸೂಕ್ತವಾಗಿದೆ ಎಂದು ಸಿದ್ದರಾಮಯ್ಯ ಅವರ ವಾದವನ್ನು ನ್ಯಾಯಮೂರ್ತಿ ತಿರಸ್ಕರಿಸಿದರು.
ಸಿದ್ದರಾಮಯ್ಯ, ರಾಜ್ಯಪಾಲರ ತೀರ್ಮಾನವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ ನಂತರ, ರಾಜ್ಯ ಮತ್ತು ರಾಷ್ಟ್ರಮಟ್ಟದ ಹಿರಿಯ ನ್ಯಾಯವಾದಿಗಳು ಪರ ಮತ್ತು ವಿರೋಧ ವಾದ ಮಂಡಿಸಿದ್ದರು.
ಮುಖ್ಯಮಂತ್ರಿ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಏನಿತ್ತೆಂಬುದನ್ನು ರಾಜ್ಯಪಾಲರು ತಿಳಿಸಿಲ್ಲ.
ಅಧಿಕಾರ ದುರ್ಬಳಕೆ ಮಾಡಿಲ್ಲ
ನಮ್ಮ ಕಕ್ಷಿದಾರರು ಅಧಿಕಾರದ ವಿವಿಧ ಹುದ್ದೆಗಳಲ್ಲಿ ಇದ್ದರೂ, ಎಂದೂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಕುಟುಂಬ ವರ್ಗಕ್ಕೆ ನಿವೇಶನ ಪಡೆಯುವ ಕೆಲಸ ಮಾಡಲಿಲ್ಲ.
ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ವಿಶೇಷ ಸಂದರ್ಭದಲ್ಲಷ್ಟೇ ಬಳಸಬೇಕು, ಹಾಗೆ ಬಳಸಿದ ಸಂದರ್ಭಗಳಲ್ಲಿ ಕಾರಣಗಳನ್ನು ನೀಡಬೇಕು, ಆದರೆ, ಯಾವುದೇ ಪ್ರಕ್ರಿಯೆ ಪಾಲಿಸದೆ, ತರಾತುರಿಯಲ್ಲಿ ಆದೇಶ ನೀಡಿದ್ದಾರೆ.
ಖಾಸಗಿ ದೂರಿನ ಮೇಲೆ 17ಎ ಅಡಿ ತನಿಖೆಗೆ ಆದೇಶ ನೀಡಲು ಸಾಧ್ಯವಿಲ್ಲ ಮತ್ತು ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ತೀರ್ಮಾವನ್ನು ಕಡೆಗಣಿಸಲಾಗಿದೆ ಎಂದು ವಾದ ಮಾಡಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮಕುಮಾರ್ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ದೂರುದಾರರ ಪರ ಮಣೀಂದರ್ ಸಿಂಗ್, ರಾಘವನ್, ಲಕ್ಷ್ಮೀ ಐಯ್ಯಂಗಾರ್ ಮತ್ತಿತರರು ವಾದ ಮಂಡಿಸಿದ್ದರು.