ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಿಡಿ ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿ ಲೋಕಾಯುಕ್ತ ಪೋಲಿಸರು ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದಿಲ್ಲಿ ಮಹತ್ವದ ಆದೇಶ ನೀಡಿದೆ.
ಮುಡಾ ಹಗರಣವನ್ನು ಮೈಸೂರು ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ, ಡಿಸೆಂಬರ್ 24ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದೆ.
ಕಾಯ್ದಿರಿಸಿದ್ದ ತೀರ್ಪು ಪ್ರಕಟ
ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಇಂದು ಪ್ರಕಟಿಸಿದರು.
ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ನಿನ್ನೆಯಷ್ಟೇ ಎತ್ತಿಹಿಡಿದ ಬೆನ್ನಲ್ಲೇ ಇಂದು ಜನಪ್ರತಿನಿಧಿಗಳ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿತು.
ದೂರುದಾರ ಸ್ನೇಹಮಯಿ ಕೃಷ್ಣ ತಮ್ಮ ವಕೀಲರಾದ ಲಕ್ಷ್ಮೀ ಐಯ್ಯಂಗಾರ್ ಮುಖಾಂತರ ಹೈಕೋರ್ಟ್ ತೀರ್ಪನ್ನು ನ್ಯಾಯಾಧೀಶರಿಗೆ ತಲುಪಿಸಿದರು.
ಎಫ್‌ಐಆರ್ ದಾಖಲಿಸಿ ತನಿಖೆ
ತದನಂತರ ನ್ಯಾಯಾಧೀಶರು ಕೋರ್ಟ್ ಹಾಲ್‌ನಲ್ಲೇ ತೀರ್ಪಿನ ಉಲ್ಲೇಖನ ನೀಡಿ, ಕ್ರಿಮಿನಲ್ ಪ್ರಕರಣದ ಆರೋಪಿ ವಿರುದ್ಧ 153 (3)ರಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೋಲಿಸರಿಗೆ ಆದೇಶಿಸಿದರು.
ಮುಖ್ಯಮಂತ್ರಿ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದನ್ನು ಪ್ರಸ್ತಾಪಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆಯೂ ಹೇಳಿದೆ.
ತನಿಖೆಗೆ ಮುಖ್ಯಮಂತ್ರಿ ಹಿಂಜರಿಕೆ ಏಕೆ ಎಂಬುದಾಗಿ ಹೈಕೋರ್ಟ್ ಉಲ್ಲೇಖಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಅಧಿಕಾರದಲ್ಲಿದ್ದಾಗಲೇ ನಿವೇಶನ
ಸಿದ್ದರಾಮಯ್ಯ ಅವರು, ಶಾಸಕರಾಗಿ, ಉಪಮುಖ್ಯಮಂತಿಯಾಗಿ, ಪ್ರತಿಪಕ್ಷದ ನಾಯಕರಾಗಿ ಮತ್ತೆ ಉಪಮುಖ್ಯಮಂತ್ರಿಯಾಗಿ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಮುಡಾ ವತಿಯಿಂದ 14 ನಿವೇಶನ ಪಡೆಯುವ ಪ್ರಕ್ರಿಯೆ ನಡೆದಿದೆ.
ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಮೃತನ ಹೆಸರಿನಲ್ಲಿ 3.16 ಎಕರೆ ಭೂಮಿಯನ್ನು ಖರೀದಿ ಮಾಡಲಾಗಿದೆ.
ನಂತರ ಈ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ, ಡಿ-ನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಪತ್ನಿಗೆ ಭೂಮಿ ದಾನ
ಮುಖ್ಯಮಂತ್ರಿ ಅವರ ಪತ್ನಿ ಅವರ ಸಹೋದರ ಖರೀದಿ ಮಾಡಿದ ಭೂಮಿಯನ್ನು ತಮ್ಮ ಸಹೋದರಿಗೆ ದಾನವಾಗಿ ನೀಡಿದ್ದಾರೆ.
ಇದಾದ ನಂತರ ಮುಡಾದಿಂದ 50:50ರ ಅನುಪಾತದಲ್ಲಿ ಹಳೆಯ ಬಡಾವಣೆಯಲ್ಲಿ 14 ನಿವೇಶನಗಳನ್ನು ಪಡೆದಿದ್ದಾರೆ, ಎಲ್ಲಾ ಸಂದರ್ಭದಲ್ಲೂ ಸಿದ್ದರಾಮಯ್ಯ ಒಂದಲ್ಲಾ ಒಂದು ಅಧಿಕಾರದ ಹುದ್ದೆಯಲ್ಲಿದ್ದರು.
ಅವರಲ್ಲದೆ, ಬೇರೆ ಸಾಮಾನ್ಯ ವ್ಯಕ್ತಿಯಿಂದ ಈ ಮಟ್ಟದ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದರು.
ರಾಷ್ಟ್ರದಲ್ಲಿ ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಯಲ್ಲಿದ್ದರೂ ಈ ಕೃತ್ಯಗಳು ನಡೆದಾಗ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಜಾರಿಯಲ್ಲಿತ್ತು.
ಸಿಆರ್‌ಪಿಸಿ ಅಡಿ ತನಿಖೆ
ಆದ್ದರಿಂದ ಸಿಆರ್‌ಪಿಸಿ ಅಡಿಯಲ್ಲೇ ತನಿಖೆ ನಡೆಸುವಂತೆಯೂ ನ್ಯಾಯಾಧೀಶರು ಆದೇಶ ಮಾಡಿದರು.
ಆರೋಪಿಯ ಬಂಧನ ಸೇರಿದಂತೆ ತನಿಖೆಯ ಸಂಪೂರ್ಣ ಅಧಿಕಾರವನ್ನು ಮೈಸೂರು ಲೋಕಾಯುಕ್ತ ಎಸ್‌ಪಿ ಅವರಿಗೆ ನೀಡಿರುವ ನ್ಯಾಯಾಧೀಶರು, ಅವಶ್ಯಕತೆಗೆ ಅನುಸಾರವಾಗಿ ತನಿಖಾಧಿಕಾರಿ ಅಧಿಕಾರ ಬಳಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.