ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಸಿಬಿಐ ತನಿಖೆಗೆ ಇರುವ ಮುಕ್ತ ಅವಕಾಶವನ್ನು ಹಿಂದಕ್ಕೆ ಪಡೆಯಲು ಸಂಪುಟ ಸಭೆ ಇಂದಿಲ್ಲಿ ತೀರ್ಮಾನ ಕೈಗೊಂಡಿದೆ.
ಅಷ್ಟೇ ಅಲ್ಲ, ಸರ್ಕಾರದ ದೈನಂದಿನ ಆಡಳಿತದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮೂಗು ತೂರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಂತ್ರಿಮಂಡಲ, ಇನ್ನು ಮುಂದೆ ಅವರ ಪತ್ರಗಳಿಗೆ ಸಚಿವರು, ಅಧಿಕಾರಿಗಳು ಉತ್ತರ ನೀಡುವಂತಿಲ್ಲ.
ರಾಜಭವನನಿಂದ ಬರುವ ಸಮಜಾಯಿಷಿಗಳನ್ನು ಸಂಪುಟದ ಗಮನಕ್ಕೆ ಅಧಿಕಾರಿಗಳು ತರಬೇಕು. ಆ ವಿಷಯನ್ನು ಸಭೆಯಲ್ಲಿ ಚರ್ಚಿಸಿ ಸರ್ಕಾರ ತಿರ್ಮಾನ ಕೈಗೊಳ್ಳಲಿದೆ.
ಅರ್ಕಾವತಿ ಬಡಾವಣೆಯಲ್ಲಿ 547 ಎಕರೆ ಡಿ-ನೋಟಿಫಿಕೇಷನ್ ಹೆಸರಿನಲ್ಲಿ ಮಾಡಿರುವ ರೀ-ಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಮತ್ತು ದಾಖಲೆಗಳನ್ನು ನೀಡುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಇಂದು ಸೇರಿದ್ದ ಸಚಿವ ಸಂಪುಟ ರಾಜ್ಯಪಾಲರು ದಿನನಿತ್ಯ ಸಣ್ಣ-ಪುಟ್ಟ ವಿಷಯಗಳಿಗೂ ಮಾಹಿತಿ ಕೇಳಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ರಾಜಭವನದ ಪತ್ರಗಳಿಗೆ ಅಧಿಕಾರಿಗಳು ಉತ್ತರ ನೀಡುವಾಗ ಲೋಪ ಉಂಟಾದರೆ, ಸರ್ಕಾರ ಸಮಸ್ಯೆ ಎದುರಿಸಬೇಕಾಗುತ್ತದೆ.
ಯಾವುದೇ ಪತ್ರ ಬಂದಾಗ ಸಂಬಂಧಪಟ್ಟ ಅಧಿಕಾರಿಗಳು ಇಲಾಖಾ ಸಚಿವರ ಗಮನಕ್ಕೆ ತರಬೇಕು. ತದನಂತರ ಆ ಕಡತವನ್ನು ಸಂಪುಟದ ಮುಂದಿಡುವಂತೆ ಮುಖ್ಯಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ.
ಕೇಂದ್ರ ಸರ್ಕಾರ ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳುತ್ತದೆ ಎಂಬ ಹಿನ್ನೆಲೆಯಲ್ಲಿ ತನಿಖೆಗೆ ನೀಡಿದ್ದ ಮುಕ್ತ ಅವಕಾಶವನ್ನು ಸಂಪುಟ ಹಿಂದಕ್ಕೆ ಪಡೆದಿದೆ.
ಕಳೆದ 2005ರಲ್ಲಿ ಸಿಬಿಐ ತನಿಖೆಗೆ ಮುಕ್ತ ಅವಕಾಶ ನೀಡಿ ಅಂದಿನ ಸರ್ಕಾರ ತೀರ್ಮಾನಕೈಗೊಂಡಿತ್ತು.
ಇದಾದ ನಂತರ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಡಿ.ಕೆ.ಶಿವಕುಮಾರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿತ್ತು.
ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆಯೂ ರಾಷ್ಟ್ರೀಕೃತ ಬ್ಯಾಂಕ್ ದೂರನ್ನು ದಾಖಲಿಸಿ ತನಿಖೆ ನಡೆಯುತ್ತಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರರು ಸಿಬಿಐ ತನಿಖೆಗೆ ನೀಡುವಂತೆ ಕಾನೂನಿನ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಕೇಂದ್ರ ಸರ್ಕಾರ ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ನ್ಯಾಯಯುತವಾಗಿ ಬಳಸದ ಕಾರಣ ಸಾರಾಸಗಟಾಗಿ ಇನ್ನು ಮುಂದೆ ಸಿಬಿಐ ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶವಿಲ್ಲ.
ಒಂದು ವೇಳೆ ತನಿಖೆಗೆ ಅವಶ್ಯವಿದ್ದರೆ ಸರ್ಕಾರ ಅದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದೆ. ಇನ್ನು ರಾಜಭವನಕ್ಕೆ ಸರ್ಕಾರ ಕಳುಹಿಸಿದ ಶಿಫಾರಸುಗಳನ್ನು ಒಂಭತ್ತು ತಿಂಗಳು ಕಳೆದರೂ ಯಾವುದೇ ನಿರ್ಧಾರ ಕೈಗೊಳ್ಳದೆ, ತಮ್ಮಲ್ಲಿಯೇ ಇಟ್ಟುಕೊಂಡು ಮುಖ್ಯಮಂತ್ರಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಸಾರ್ವಜನಿಕರಿಗೆ ವಸ್ತುಸ್ಥಿತಿ ತಿಳಿಸುವ ಉದ್ದೇಶದಿಂದ ಈ ವಿಚಾರಗಳನ್ನು ಮಾಧ್ಯಮಕ್ಕೆ ಹೇಳುತ್ತಿದ್ದೇವೆ. ಇನ್ನು ಮುಂದೆ ರಾಜ್ಯಪಾಲರು ಕೇಳುವ ಸಮಜಾಯಿಷಿಗಳಿಗೆ ಸಂಪುಟದಲ್ಲಿ ಚರ್ಚಿಸಿ ಉತ್ತರ ನೀಡಲಾಗುವುದು ಎಂದರು.
ಇದರ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಎರಡು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.