ಬೆಂಗಳೂರು:ಬಿಡಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಕ್ಕಿಟ್ಟಿಗೆ ಸಿಲುಕಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಂದಿನ ನಡೆಯ ಬಗ್ಗೆ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ನಗರಕ್ಕೆ ಕರೆಸಿಕೊಂಡು ಚರ್ಚೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಉಭಯ ನಾಯಕರು, ರಾಜ್ಯದ ಪ್ರಮುಖ ಮುಖಂಡರು ಮತ್ತು ಸಚಿವರ ಜೊತೆಯೂ ಮುಖಾಮುಖಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕಾನೂನಿನ ಸಂಕಷ್ಟ ಎದುರಾದರೆ, ಮುಂದೇನು ಮಾಡಬೇಕೆಂಬ ಬಗ್ಗೆ ಖರ್ಗೆ ಮುಂದಾಲೋಚನೆಯಲ್ಲಿ ತೊಡಗಿದ್ದಾರೆ.
ಸುದೀರ್ಘ ಚರ್ಚೆ
ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯಗಳ ತೀರ್ಪು ಹೊರಬರುತ್ತಿದ್ದಂತೆ ಕೇರಳ ಪ್ರವಾಸದಲ್ಲಿದ್ದ ವೇಣುಗೋಪಾಲ್ ಅವರನ್ನು ನಗರಕ್ಕೆ ಕರೆಸಿಕೊಂಡು ಎಲ್ಲಾ ಬೆಳವಣಿಗೆ ಕುರಿತು ಸುದೀರ್ಘ ಚರ್ಚೆ ಮಾಡಿದ್ದಾರೆ.
ತದನಂತರ ರಾಜ್ಯದ ಆಯ್ದ ಕೆಲವು ಹಿರಿಯ ಮುಖಂಡರೊಂದಿಗೆ, ಇಂತಹ ಪರಿಸ್ಥಿತಿಯಲ್ಲಿ ಮುಂದಿನ ನಡೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸಚಿವರಷ್ಟೇ ಅಲ್ಲದೆ, ವಿಧಾನಸಭೆಯ ಕೆಲವು ಆಯ್ದ ಶಾಸಕರ ಜೊತೆಯೂ ಖರ್ಗೆ ಮತ್ತು ವೇಣುಗೋಪಾಲ್ ಮಾತನಾಡಿದ್ದಾರೆ.
ಶಿವಕುಮಾರ್ ಜೊತೆ ಮಾತುಕತೆ ಇಲ್ಲ
ಇಂತಹ ಸನ್ನಿವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ.
ರಾಜಧಾನಿಯಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೂ ಮಾಹಿತಿ ಇದೆ.
ವೇಣುಗೋಪಾಲ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವ ದಾಖಲೆ ಇದೆ, ಬೆಳಗ್ಗೆ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ, ನಂತರ ಇತರ ಮುಖಂಡರೊಂದಿಗೂ ಚರ್ಚಿಸಿದ್ದಾರೆ.
ಎಲ್ಲವೂ ಗೌಪ್ಯ
ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ವೇಣುಗೋಪಾಲ್, ಈ ಬಾರಿ ಎಲ್ಲವನ್ನೂ ಗೌಪ್ಯವಾಗಿ ಇಟ್ಟಿದ್ದು, ಮಾಧ್ಯಮಗಳ ಮುಂದೆಯೂ ಯಾವುದೇ ಹೇಳಿಕೆ ನೀಡಿಲ್ಲ.
ಖರ್ಗೆ ಅವರು ಮಾತ್ರ ನಿನ್ನೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಯವರು ಸಣ್ಣ ವಿಷಯವನ್ನು ಇಟ್ಟುಕೊಂಡು ದೊಡ್ಡದನ್ನಾಗಿ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾದ ನಂತರವೂ ನಾವು ಅವರ ಜೊತೆ ನಿಂತಿದ್ದೇವೆ, ಅವರಿಗೆ ಬೆಂಬಲ ಕೊಟ್ಟಿದ್ದೇವೆ ಎಂದರು, ಆದರೆ, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂಬ ಸೂಕ್ಷ್ಮ ಸಂದೇಶ ರವಾನೆ ಮಾಡಿದ್ದಾರೆ.
ಸಿದ್ದರಾಮಯ್ಯ ಇವತ್ತು ಮುಖ್ಯಮಂತ್ರಿ ಇರುತ್ತಾರೆ, ನಾಳೆ ಇರಲ್ಲ, ಆದರೆ, ಪಕ್ಷ ಇರಲಿದೆ, ನಾವು ಮುಡಾ ವಿಚಾರದಲ್ಲಿ ಅವರ ಹಿಂದೆ ನಿಂತಿರುವುದು ಪಕ್ಷದಲ್ಲಿರುವ ಕಾರಣ ಎಂದರು.