ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜಕಾರಣ ಬಿಟ್ಟು ರಾಜ್ಯದಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಲಿ, ಕಾಂಗ್ರೆಸ್ ಸರ್ಕಾರ ಬೇಕಾದ ಸಹಕಾರ ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ಕು, ಕೈಗಾರಿಕೆಯಂತಹ ದೊಡ್ಡ ಖಾತೆ ಕೊಟ್ಟಿದ್ದಾರೆ, ಈ ಅವಕಾಶ ಬಳಸಿಕೊಳ್ಳಲಿ ಎಂದರು.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯವಾದುದು, ಹಾಸನ, ಬೆಂಗಳೂರು, ಮಂಡ್ಯ, ಬೀದರ್, ಕಲಬುರಗಿ ಸೇರಿದಂತೆ ಇತರೇ ಭಾಗಗಳಿಗೆ ಉತ್ತಮ ಕೆಲಸ ಮಾಡಿ, ಇತಿಹಾಸ ಬಿಟ್ಟು ಹೋಗಲಿ, ರಾಜಕೀಯ ಇದ್ದಿದ್ದೇ, ಒಳ್ಳೆ ಅವಕಾಶ ಏಕೆ ಕಳೆದುಕೊಳ್ಳುತ್ತಿದ್ದಾರೆ.
ಐದು ಗ್ಯಾರಂಟಿ ಈಡೇರಿಸಿದ್ದೇವೆ
ಗೃಹ ಸಚಿವ ಡಾ.ಪರಮೇಶ್ವರ್ ಅವರೊಂದಿಗೆ ಪ್ರತಿದಿನ ರಾಜಕೀಯ ಮಾಡುತ್ತಲೇ ಇರುತ್ತೇವೆ, ಅಭಿವೃದ್ಧಿ ಇದ್ದರೇ ರಾಜಕೀಯ, ಐದು ಗ್ಯಾರಂಟಿ ಈಡೇರಿಸಿದ್ದೇವೆ, ಎತ್ತಿನಹೊಳೆ ಕೆಲಸ ಮುಗಿಸಬೇಕು, ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು, ಪ್ರತಿದಿನ ಸಮಯ ಓಡುತ್ತಿರುತ್ತದೆ.
ಕಾಂಗ್ರೆಸ್‌ನ 136 ಶಾಸಕರು ಒಟ್ಟಿಗೆ ಇದ್ದೇವೆ, ನಾಯಕರ ಹಿಂದೆ ಅಧಿಕಾರಿಗಳು ಬೇಕಾಗಿಲ್ಲ, ಆಲೋಚಿಸುತ್ತೇವೆ, ಚರ್ಚೆ ಮಾಡುತ್ತೇವೆ, ಅಭಿಪ್ರಾಯ ಕೇಳುತ್ತೇವೆ, ಮಾತನಾಡುವವರು ಹಾಗೂ ತೀರ್ಮಾನಿಸುವವರು ಒಬ್ಬರೇ.
ಎಡಿಜಿಪಿ ಚಂದ್ರಶೇಖರ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ಮಾಡುವವರು ಅವರು, ತನಿಖೆಗೆ ಒಳಗಾಗುವವರು ಅವರು, ಅದಕ್ಕೂ ನನಗೂ ಸಂಬಂಧವಿಲ್ಲ.
ಸರ್ಕಾರ ಬೀಳಿಸಲು ಸಾವಿರ ಕೋಟಿ ರೂ
ಸರ್ಕಾರ ಬೀಳಿಸಲು ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎನ್ನುವ ಯತ್ನಾಳ್ ಹೇಳಿಕೆ ಬಗ್ಗೆ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದೆ, ಪಕ್ಷ ಹಾಗೂ ಸರ್ಕಾರ ಉರುಳಿಸಲು ಈ ಕೆಲಸ ನಡೆಯುತ್ತಿದೆ, ಕಾನೂನು ಸಲಹೆಗಾರರ ಬಳಿ ಚರ್ಚಿಸಲಾಗುವುದು, ಈ ಕೃತ್ಯ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಆಗಬೇಕು ಎಂದರು.
2025ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಸಲು ಪ್ರಯತ್ನ ಮಾಡಲಾಗುವುದು, ಈಗಾಗಲೇ ನೀರನ್ನು ಮೇಲಕ್ಕೆತ್ತಿ ಸಂಗ್ರಹ ಮಾಡಲಾಗಿದೆ, ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಅರಣ್ಯ ಭೂಮಿ ಗುರುತಿಸಲಾಗಿದೆ, ನೀರಾವರಿ ಇಲಾಖೆಗೆ ವರ್ಗಾವಣೆ ಮಾಡಬೇಕು, ಈ ವಿಚಾರವಾಗಿ ಪ್ರತ್ಯೇಕ ಸಭೆ ನಡೆಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ, ಅರಣ್ಯ ಸಚಿವರ ಬಳಿಯೂ ಚರ್ಚಿಸಲಾಗುವುದು.
ಮಳೆ ಕಡಿಮೆಯಾಗುತ್ತಿದೆ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ, ಬಿಜೆಪಿ ಆಡಳಿತಾವಧಿಯಲ್ಲಿ ಕೊರಟಗೆರೆ ಬಳಿ ಬೈರಗೊಂಡ್ಲು ಜಲಾಶಯ ನಿರ್ಮಾಣ ಯೋಜನೆ ಬದಲಾವಣೆ ಮಾಡಿದ್ದರು, ಈ ಕಾರಣಕ್ಕೆ ಸ್ಥಳ ವೀಕ್ಷಣೆ ಮಾಡಬೇಕು.
ದೊಡ್ಡಬಳ್ಳಾಪುರದ ಒಂದಷ್ಟು ಭಾಗವೂ ಸೇರಿಕೊಂಡಿದೆ, ಪರಿಹಾರ ವಿಚಾರದಲ್ಲಿ ವ್ಯಾಜ್ಯಗಳಿವೆ, ರೈತರು ಒಂದೇ ರೀತಿ ಪರಿಹಾರ ನೀಡಿ ಎನ್ನುತ್ತಿದ್ದಾರೆ, ದಸರಾ ನಂತರ ಎತ್ತಿನಹೊಳೆಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ ಮಾಡಲಾಗುವುದು ಎಂದರು.