ಬೆಂಗಳೂರು:ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸುವಂತೆ ಜೆಡಿಎಸ್ ಶಾಸಕರು ಸರ್ಕಾರದ ಮುಖ್ಯಕಾರ್ಯದರ್ಶಿ ಅವರನ್ನು ಒತ್ತಾಯಿಸಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ವಿ.ಸುರೇಶ್ ಬಾಬು ಅವರ ನೇತೃತ್ವದಲ್ಲಿ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ ಮಾಡಿ, ಈ ಅಧಿಕಾರಿ ತಮ್ಮ ಸೇವಾವಧಿಯಲ್ಲಿ ನಡೆಸಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಾರೆ.
ಹಿಮಾಚಲ ಪ್ರದೇಶ ಕೇಡರ್‌ನ ಅಧಿಕಾರಿಯಾಗಿರುವ ಇವರು ಸಬೂಬುಗಳನ್ನು ಹೇಳಿಕೊಂಡು ಕರ್ನಾಟಕದಲ್ಲೇ ಹಲವು ವರ್ಷಗಳಿಂದ ಬಿಡಾರ ಹೂಡಿ ಮಾಡಬಾರದ ಭ್ರಷ್ಟಾಚಾರ ಕಾರ್ಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಲ್ಯಾಂಡ್ ಮಾಫಿಯಾ ಜೊತೆ
ಪ್ರಮುಖ ಹುದ್ದೆಗಳಲ್ಲೇ ಇರುವ ಚಂದ್ರಶೇಖರ್, ಬೆಂಗಳೂರಿನಲ್ಲಿ ಲ್ಯಾಂಡ್ ಮಾಫಿಯಾ ಜೊತೆ ಕೈಜೋಡಿಸಿ ಭೂಮಾಲಿಕರನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡಿದ್ದಾರೆ, ಅಲ್ಲದೆ, ಕೆಲವು ಪ್ರಕರಣಗಳಲ್ಲಿ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣಗಾರರಿಗೆ ಕಿರುಕುಳ ನೀಡಿದ್ದಾರೆ.
ತಮ್ಮ ಕೆಳಹಂತದ ಅಧಿಕಾರಿಗಳನ್ನು ಹಣ ತಂದು ಕೊಡುವಂತೆ ಪೀಡಿಸಿದ್ದು, ಈ ಸಂಬಂಧ ದೂರುಗಳೂ ದಾಖಲಾಗಿವೆ, ಆದರೂ ಇದುವರೆಗೂ ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಇಲ್ಲ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದಾಖಲೆಗಳನ್ನು ಇಟ್ಟುಕೊಂಡೇ ಅಧಿಕಾರಿ ವಿರುದ್ಧ ಆರೋಪ ಮಾಡಿದ್ದಾರೆಯೇ ಹೊರತು, ವೈಯಕ್ತಿಕ ಟೀಕೆ ಮಾಡಿಲ್ಲ, ಆದರೆ, ಚಂದ್ರಶೇಖರ್ ಎಲ್ಲ ಮೀರಿ ತಮ್ಮ ಸಹೋದ್ಯೋಗಿಗಳಿಗೆ ಪತ್ರ ಬರೆಯುವ ಮೂಲಕ ಉನ್ನತ ಹುದ್ದೆಯಲ್ಲಿರುವವರ ಅವಹೇಳನ ಮಾಡಿದ್ದಾರೆ.
ನೀವು ಇವರ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದಾಖಲೆ ಸಹಿತ ಪತ್ರ ಬರೆದು ಕ್ರಮ ಜರುಗಿಸಬೇಕೆಂದು ಮುಖ್ಯಕಾರ್ಯದರ್ಶಿ ಅವರನ್ನು ಕೋರಿದ್ದಾರೆ.