ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಗೆ ಸಿದ್ಧತೆ ಮಾಡಿಕೊಂಡಿದೆ.
ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡ ಸೇರಿದಂತೆ ಕೆಲವರು ಚುನಾವಣಾ ಬಾಂಡ್ ಮೂಲಕ 8,000 ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೊಂದು ಎಸ್‌ಐಟಿ ರಚಿಸಲು ಮುಂದಾಗಿದೆ.
ಬಿಡಿ ನಿವೇಶನಗಳ ಹಂಚಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು ಭ್ರಷ್ಟಾಚಾರಕ್ಕೆ ದಾರಿ ಮಾಡಿರುವ ಹಿನ್ನೆಲೆಯಲ್ಲಿ ಹಗರಣದ ತನಿಖೆಗೆ ಮುಂದಾಗಿದೆ.
ತನಿಖೆ ಬಗ್ಗೆ ಮಾಹಿತಿ
ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳ ತೀರ್ಪು ಹಾಗೂ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ನಡೆಸುತ್ತಿರುವ ತನಿಖೆ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರು ಕೋಟ್ಯಂತರ ರೂ. ಬೆಲೆ ಬಾಳುವ ೧೪ ನಿವೇಶನಗಳನ್ನು ಪಡೆದಿರುವ ಸಂಬಂಧ ನ್ಯಾಯಾಲಯದ ತೀರ್ಪು ಹಾಗೂ ಆ ನಂತರ ಲೋಕಾಯುಕ್ತರು ಮುಖ್ಯಮಂತ್ರಿ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಿ ಎಫ್‌ಐಆರ್ ದಾಖಲಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಂದಲೂ ಇ.ಡಿ. ಮಾಹಿತಿ ಪಡೆಯಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗೃಹ ಸಚಿವರ ಸರಣಿ ಸಭೆ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಪ್ರವೇಶಿಸಲು ಹೊರಟಿರುವುದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವರು ತಿರುಗಿಬಿದ್ದಿರುವ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಪರಮೇಶ್ವರ್ ಇಂದು ಸರಣಿ ಸಭೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸದಾಶಿವನಗರದಲ್ಲಿನ ಡಾ.ಪರಮೇಶ್ವರ್ ಮನೆಗೆ ತೆರಳಿ ಗೌಪ್ಯ ಮಾತುಕತೆ ನಡೆಸಿದರು.
ತದನಂತರ ಗೃಹ ಸಚಿವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಕೇಂದ್ರಕ್ಕೆ ವರದಿ
ಎಡಿಜಿಪಿ ಚಂದ್ರಶೇಖರ್ ವಿರುದ್ಧ ರಾಜಭವನವೇ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಕಳುಹಿಸಿದೆ ಎನ್ನಲಾಗಿದೆ.
ಅಲ್ಲದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪೋಲಿಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧದ ಭ್ರಷ್ಟಾಚಾರ ಹಾಗೂ ಅವರ ವಿರುದ್ಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳ ಮಾಹಿತಿಗಳನ್ನೂ ಗೃಹ ಸಚಿವರು ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ್ದಾರಂತೆ.
ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ರಾಜ್ಯ ಸರ್ಕಾರ ಚುನಾವಣಾ ಬಾಂಡ್ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಇದರ ಬೆನ್ನಲ್ಲೇ ಡಾ.ಪರಮೇಶ್ವರ್ ಸರಣಿ ಸಭೆಗಳನ್ನು ನಡೆಸಿದ್ದಾರೆ, ಮಾತುಕತೆ ವಿವರ ತಿಳಿದುಬಂದಿಲ್ಲ.
ಅಡ್ಡಿಪಡಿಸಿದರೆ ಕ್ರಮ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಚಂದ್ರಶೇಖರ್ ನೇತೃತ್ವದ ಎಸ್‌ಐಟಿಯನ್ನು ಕಾನೂನು ಪ್ರಕಾರ ರಚಿಸಲಾಗಿದೆ, ಅವರ ಕೆಲಸ ಅವರು ಮಾಡುತ್ತಾರೆ, ಅಡ್ಡಿಪಡಿಸಿದರೆ ಪೋಲಿಸರು ಕ್ರಮಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ಚಂದ್ರಶೇಖರ್ ಅವರು, ತಮ್ಮ ಪತ್ರದಲ್ಲಿ ಬರ್ನಾಡ್ ಷಾ ಅವರ ಹೇಳಿಕೆ ಉಲ್ಲಖಿಸಿರುವುದು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದ್ದಲ್ಲ, ತಮಗೇ ಹೇಳಿದ್ದೆಂದು ಅವರ‍್ಯಾಕೆ ಭಾವಿಸಬೇಕು ಎಂದರು.