ಬೆಂಗಳೂರು:ಮುಡಾ ಹಗರಣದಲ್ಲಿ ನ್ಯಾಯಾಲಯಗಳ ತೀರ್ಪಿನಿಂದ ಕಾನೂನಿನ ಕುಣಿಕೆಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾನುಭೂತಿ ಪಡೆಯಲು 14 ನಿವೇಶನಗಳನ್ನು ಹಿಂತಿರುಗಿಸುವ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡದಿದ್ದರೆ ನಿವೇಶನಗಳನ್ನು ಏಕೆ ಹಿಂದಕ್ಕೆ ನೀಡುತ್ತಿದ್ದಾರೆ, ಈ ಮೂಲಕ ತಪ್ಪನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎಂದರು.
ಕಾನೂನಿನ ಕುಣಿಕೆಯಿಂದ ಪಾರಾಗುವ ಉದ್ದೇಶದಿಂದ ಈ ನಾಟಕ ಆಡುತ್ತಿದ್ದಾರೆ, ಸಿದ್ದರಾಮಯ್ಯ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು, ಕೆಲವೇ ಗಂಟೆಗಳಲ್ಲಿ ಆದರೂ ಅಚ್ಚರಿಯಿಲ್ಲ.
ಭಂಡತನ ಬಿಟ್ಟು ರಾಜೀನಾಮೆ ನೀಡಿ
ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಇನ್ನಾದರೂ ತಮ್ಮ ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅದಕ್ಕೂ ಮೊದಲು ಗೌರವಾನ್ವಿತ ರಾಜ್ಯಪಾಲರ ಕ್ಷಮೆ ಕೋರಬೇಕು.
ಸಾಮಾಜಿಕ ಕಾರ್ಯಕರ್ತ, ಬಡ ಕುಟುಂಬದ ಸ್ನೇಹಮಯಿ ಕೃಷ್ಣ ಅವರ ಮೇಲೆ ದೂರು ದಾಖಲಿಸಿ ಬೆದರಿಸುವ ತಂತ್ರವನ್ನು ಮುಖ್ಯಮಂತ್ರಿಗಳು, ಹಾಗೂ ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಡಿಜಿಪಿ, ತಕ್ಷಣ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು.
ಸಿದ್ದರಾಮಯ್ಯ ಇಳಿಯುವುದನ್ನೇ ಕಾಯುತ್ತಿದ್ದಾರೆ
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದನ್ನೇ ಕಾಂಗ್ರೆಸ್‌ನಲ್ಲಿ ಕೆಲವರು ಕಾಯುತ್ತಿದ್ದಾರೆ ಎಂದು ಅವರ ಆಪ್ತರಾದ ಮಹದೇವಪ್ಪನವರೇ ಹೇಳಿದ್ದಾರೆ.
ಅದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯನವರು ಇವತ್ತು ಇರ್ತಾರೆ, ನಾಳೆ ಹೋಗ್ತಾರೆ ಎಂದಿದ್ದಾರೆ, ಇದು ನಿರ್ಗಮನದ ಮುನ್ಸೂಚನೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೌಪ್ಯವಾಗಿ ಡಾ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಇನ್ನೂ ರಕ್ಷಿಸಲು ಸಾಧ್ಯವಿಲ್ಲ, ಕಷ್ಟ ಆಗುತ್ತಿದೆ, ಪಕ್ಷಕ್ಕೂ ಮುಜುಗರ ಆಗುತ್ತಿದೆ, ಬೇಗ ರಾಜೀನಾಮೆ ಕೊಟ್ಟರೆ ಅಷ್ಟೇ ಒಳಿತೆಂಬ ವಿಚಾರ ಚರ್ಚೆ ಆಗಿದೆ ಎಂಬ ವಿಚಾರ ನಮಗೆ ಲಭಿಸಿದೆ ಎಂದರು.
ಬಿಜೆಪಿ ನಿರಂತರ ಹೋರಾಟ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರ ಹೋರಾಟ ಮಾಡುತ್ತಿದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ, ಮೈಸೂರು ಮುಡಾ ಹಗರಣ, ಎಸ್‌ಇಪಿ, ಟಿಎಸ್‌ಪಿ ಹಣ ದುರುಪಯೋಗದಂತಹ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದೇವೆ.
ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಆರೋಪ ಕೇಳಬಂದಾಗ, ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಕಪ್ಪು ಚುಕ್ಕಿ ಇರಲಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದರು.
ಹಿಂದಿನ 5 ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರ ಆರೋಪಗಳು ಬಂದಾಗ ಲೋಕಾಯುಕ್ತಕ್ಕೆ ಬೀಗ ಹಾಕಿ, ಎಸಿಬಿ ರಚಿಸಿ, ಆರೋಪಗಳನ್ನು ಮುಚ್ಚಿಹಾಕಲು ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು.
ಕೆಂಪಣ್ಣ ಆಯೋಗ ವರದಿ
ಸಿದ್ದರಾಮಯ್ಯ ವಿರುದ್ಧ ಗುರುತರ ಆರೋಪಗಳನ್ನು ಕೆಂಪಣ್ಣ ಆಯೋಗ ವರದಿಯಲ್ಲಿ ಉಲ್ಲೇಖಿಸಿದ್ದರೂ ಕಣ್ಮುಚ್ಚಿ ಕುಳಿತಿದ್ದರು ಎಂದು ಟೀಕಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ನಂತರ ಮೈಸೂರು ಮುಡಾದಲ್ಲಿ ಸಾವಿರಾರು ಕೋಟಿ ರೂ. ಬೆಲೆ ಬಾಳುವ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ತಮಗೆ ಬೇಕಾದ ಪುಡಾರಿಗಳು ಹಾಗೂ ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಕೊಟ್ಟಿದ್ದಾರೆ.
ಬಿಜೆಪಿ-ಜೆಡಿಎಸ್ ಮೈಸೂರು ಪಾದಯಾತ್ರೆಗೆ ಮುಂದಾದಾಗ, ಬೆಂಗಳೂರಿನ ಹೊರವಲಯದಲ್ಲೇ ತಡೆಯುವ ಕೆಲಸ ಮಾಡಿದ್ದರು, ನಂತರ ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮುನ್ನ ಏಕವ್ಯಕ್ತಿ ತನಿಖಾ ಸಮಿತಿ ರಚಿಸಿದ್ದರು.
ಅಧಿವೇಶನದಿಂದ ಪಲಾಯನ
ನಿಲುವಳಿ ಸೂಚನೆ ಮಂಡಿಸಲು ಮುಂದಾದಾಗ, ಅವಕಾಶ ಕೊಡದೆ, ಅಧಿವೇಶನ ಮೊಟಕುಗೊಳಿಸಿ ಪಲಾಯನ ಮಾಡಿದ್ದರು ಎಂದು ಟೀಕಿಸಿದರು.
ಮುಡಾದ 14 ನಿವೇಶನ ವಾಪಸ್ ಕೊಡುವ ಸಂದರ್ಭ ಬರಲಿದೆ ಎಂದು ಈ ಮೊದಲೇ ಹೇಳಿದ್ದೆವು, ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿಯವರು ಪತಿ ಹಾಗೂ ಪುತ್ರನ ಗಮನಕ್ಕೆ ಬಾರದೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕುಳಿತು ಮುಡಾಕ್ಕೆ ಪತ್ರ ಬರೆದು 14 ನಿವೇಶನ ವಾಪಸ್ ಕೊಡುವುದಾಗಿ ಹೇಳಿದ್ದಾರೆ.
ಪಾರ್ವತಿ ಅವರೇ ಸ್ವಇಚ್ಛೆಯಿಂದ ಈ ಪತ್ರ ಬರೆದರೇ, ಅಥವಾ ಬೇರೆಯವರ ಒತ್ತಾಯಕ್ಕೆ ಬರೆದರೋ ಗೊತ್ತಿಲ್ಲ. ತಪ್ಪೇ ಮಾಡಿಲ್ಲ, ನಾನು ಜಗ್ಗುವುದಿಲ್ಲ, ನಾನು ಬಗ್ಗುವುದಿಲ್ಲ, ಇದೆಲ್ಲ ರಾಜಕೀಯಪ್ರೇರಿತ ಎಂದು ಆರ್ಭಟಿಸುತ್ತಿದ್ದ ಮುಖ್ಯಮಂತ್ರಿ ಅವರು 62 ಕೋಟಿ ರೂ. ಪರಿಹಾರ ಕೊಡುತ್ತಾರಾ, ನಾನ್ಯಾಕೆ ಸೈಟ್ ವಾಪಸ್ ಕೊಡಲಿ ಎಂದಿದ್ದರು ಎಂದು ವ್ಯಂಗ್ಯವಾಡಿದರು.