ಬೆಂಗಳೂರು:ಸರಣಿ ಹಗರಣಗಳ ಸುಳಿಗೆ ಸಿಲುಕಿರುವ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಮುಂದಾಗಿದೆ.
ಸಿದ್ದರಾಮಯ್ಯ ನಂತರ ಯಾರು ಎಂಬ ಯಕ್ಷ ಪ್ರಶ್ನೆ ವರಿಷ್ಠರಿಗೆ ಎದುರಾಗಿದ್ದು ಇದಕ್ಕಾಗಿ ಸಮರ್ಥ ನಾಯಕನೊಬ್ಬನ ಆಯ್ಕೆಗೆ ಮುಂದಾಗಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಂತಹ ವರ್ಚಸ್ವಿ ಹಾಗೂ ಕೇಂದ್ರ ಸರ್ಕಾರವನ್ನು ಜೊತೆಗೆ ತೆಗೆದುಕೊಂಡು ಹೋಗುವಂತಹ ನಾಯಕನನ್ನೂ ಕರ್ನಾಟಕದಲ್ಲೂ ಹುಡುಕುತ್ತಿದೆ.
ಮುಖ್ಯಮಂತ್ರಿಯಾಗಲು ಹಲವರ ಕಾತರ
ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವರು ಮುಖ್ಯಮಂತ್ರಿಯಾಗಲು ಕಾತರದಲ್ಲಿದ್ದಾರೆ.
ಸಿದ್ದರಾಮಯ್ಯ ನಂತರ ನಾಯಕನಾಗಲು ಹಲವಷ್ಟು ಮಂದಿ ತುದಿಗಾಲಲ್ಲಿ ನಿಂತಿದ್ದರೂ, ರೇವಂತ ರೆಡ್ಡಿ ಗುಣವುಳ್ಳ ವ್ಯಕ್ತಿ ಆಯ್ಕೆಗಾಗಿ ಎಐಸಿಸಿ ಕಸರತ್ತು ನಡೆಸಿದೆ.
ಮುಡಾ ಬಿಡಿ ನಿವೇಶನಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾನೂನು ಇಕ್ಕಟ್ಟಿನಲ್ಲಿ
ಹಣ ದುರ್ಬಳಕೆ ಆರೋಪದ ಮೇಲೆ ಇ.ಡಿ. ಪ್ರಕರಣ ದಾಖಲಿಸಿದೆ, ಕಾನೂನು ಇಕ್ಕಟ್ಟಿಗೆ ಸಿಲುಕಿರುವ ಸಿದ್ದರಾಮಯ್ಯ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಹಿಂಜರಿಯುವುದಿಲ್ಲ.
ಕೇಂದ್ರದ ವಿರುದ್ಧ ಜಿದ್ದಾಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ಅವರನ್ನು ಕಾನೂನು ಇಕ್ಕಟ್ಟಿಗೆ ಸಿಲುಕಿಸಲು ಹೊರಟಿರುವುದು ಎಐಸಿಸಿ ವರಿಷ್ಠರಿಗೆ ಆತಂಕ ತಂದಿದೆ.
ಇಂತಹ ಆರೋಪಗಳ ಮೇಲೆ ದೆಹಲಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳನ್ನೂ ಜೈಲಿಗೆ ಕಳುಹಿಸಲಾಗಿತ್ತು, ಅವರು ಅಧಿಕಾರ ತ್ಯಜಿಸಿದ್ದಾರೆ.
ಹೊಸಬರ ನೇಮಕಾತಿ
ಇಂತಹ ಸನ್ನಿವೇಶದಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಮುಜುಗರ ಆಗದಿರಲು ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸಿ ಹೊಸಬರ ನೇಮಕಾತಿಗೆ ಮುಂದಾಗಿದೆ.
ಹೊಸ ನಾಯಕನ ಅನ್ವೇಷಣೆಗೆ ತೊಡಗಿರುವ ವರಿಷ್ಠರು, ಮತ್ತೊಂದೆಡೆ ಸಿದ್ದರಾಮಯ್ಯ ಮನವೊಲಿಸಿ ಅಧಿಕಾರದಿಂದ ಕೆಳಗಿಳಿಸಲು ನಿರ್ಧರಿಸಿದ್ದಾರೆ.