ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹ ಅಗತ್ಯವಿಲ್ಲ
ರಾಯಚೂರು:ಕಾಂಗ್ರೆಸ್ ವರಿಷ್ಠರೊಂದಿಗೆ ರಾಜ್ಯ ನಾಯಕರ ಚರ್ಚೆ ಸಹಜ, ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳ ಅಗತ್ಯವಿಲ್ಲ, ವಿರೋಧಪಕ್ಷಗಳು ಸುಳ್ಳು ಆರೋಪ ಮಾಡಿ ರಾಜೀನಾಮೆ ಕೇಳಿದರೆ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಆರೋಪಗಳನ್ನು ಮಾಡಿದರೆ, ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದರು.
ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮುಡಾ ಸದಸ್ಯರೂ ಆಗಿದ್ದಾರೆ, ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ, ಪ್ರಕರಣದ ವಿರುದ್ಧ ವಿರೋಧಪಕ್ಷದವರ ಪಾದಯಾತ್ರೆ ಬೇಡ ಎಂದವರಲ್ಲಿ ಅವರೂ ಒಬ್ಬರು.
ಅಶೋಕ್ ರಾಜೀನಾಮೆ ನೀಡಲಿ
ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ರಾಜೀನಾಮೆ ನೀಡಲಿ ಎಂದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶವಿದೆ, ಒಳಮೀಸಲಾತಿಗೆ ಸರ್ಕಾರದ ವಿರೋಧವಿಲ್ಲ, ಪಕ್ಷದ ವರಿಷ್ಠರು ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.
ತುಂಗಭದ್ರಾ ಜಲಾಶಯದಲ್ಲಿ 102 ಟಿಎಂಸಿ ನೀರು ಸಂಗ್ರಹವಿದೆ, ಸುಮಾರು 30 ಟಿಎಂಸಿ ನೀರಿನಷ್ಟು ಹೂಳು ತುಂಬಿರುವುದರಿಂದ ಕೆಳಭಾಗದ ರೈತರಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ, ತುಂಡಾಗಿದ್ದ 19ನೇ ಗೇಟ್ ದುರಸ್ತಿ ಐದು ದಿನಗಳೊಳಗೆ ಮುಗಿಸಿ ಬಾಗಿನ ಅರ್ಪಿಸಲಾಗಿದೆ, ಕೆಳಭಾಗದ ರೈತರಿಗೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ
ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಕರ್ನಾಟಕ ನಾಮಕರಣ ಮಾಡಿ 50 ವರ್ಷ ಸಂದಿರುವ ಸುಸಂದರ್ಭದಲ್ಲಿ ಕರ್ನಾಟಕ ಸಂಭ್ರಮ ಆಚರಿಸಲಾಗುತ್ತಿದೆ, ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ.
ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ, ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ, ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ, ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ, ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ ಎಂದರು.
ದಾರಾಳತನ ಬೇಡ
ಗೋಕಾಕ್ ಚಳವಳಿ ಪರಿಣಾಮ ಕನ್ನಡ ಕಾವಲು ಸಮಿತಿ ರಚಿಸಲಾಯಿತು, ಬಳಿಕ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಯಿತು, ಪ್ರತಿಯೊಂದು ಭಾಷೆ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ, ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ದಾರಾಳತನ ಬೇಡ.
ತಾವು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ಇಂಗ್ಲಿಷ್ ಟೈಪ್ ರೈಟರ್ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ಗಳನ್ನು ಕೊಡುತ್ತಿದ್ದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕನ್ನಡ ಚಳವಳಿಗಾರರು ಹಾಗೂ ಗೋಕಾಕ್ ಚಳವಳಿಗಾರರನ್ನು ಸನ್ಮಾನಿಸಲಾಯಿತು.