ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದ್ದು, ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅನೇಕ ನಾಯಕರು ಹಾಗೂ ಸಚಿವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಭಂಡತನ ಶೋಭೆ ತರುವುದಿಲ್ಲ
ಮುಡಾ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು, ಭಂಡತನ ಅವರಿಗೆ ಶೋಭೆ ತರುವುದಿಲ್ಲ.
ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅಭಿವೃದ್ಧಿ ಕಾರ್ಯಗಳು ಆರಂಭವೇ ಆಗಿಲ್ಲ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ, ಜನ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನೋ ಪ್ಲಾನ್‌ನೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗಿದ್ದರು, ಅದೇನು ಪ್ಲಾನ್ ಎಂಬುದು ಗೊತ್ತಾಗಿಲ್ಲ.
ಸರ್ಕಾರದ ಪತನ ಆರೋಪ
ವಿಜಯೇಂದ್ರ ಮುಖ್ಯಮಂತ್ರಿ ಕನಸು ಕಾಣುತ್ತಿದ್ದು, ಕಾಂಗ್ರೆಸ್ ಸರ್ಕಾರದ ಪತನಕ್ಕೆ ಷಡ್ಯಂತ್ರ ನಡೆಸುತ್ತಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಕನಸು ಕಾಣುವ ಸಂದರ್ಭ ಬಂದರೆ ಹೇಳುವೆ, ಸದ್ಯಕ್ಕೆ ಬೇಡ ಎಂದು ನಗುತ್ತಾ ತಿಳಿಸಿದರು.
ಒಳಮೀಸಲಾತಿ ಕುರಿತು ಸಿದ್ದರಾಮಯ್ಯ ಅವರಲ್ಲಿ ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ, ಮುಖ್ಯಮಂತ್ರಿ ಅವರಿಗೆ ಜಾತಿ ಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದಿದ್ದರೆ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಸೇರಿದ್ದ ವರದಿಯನ್ನು ಅನುಷ್ಠಾನ ಮಾಡಬೇಕಿತ್ತು.
ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿರುವ ಕ್ಷಣದಲ್ಲಿ ಜಾತಿ ಗಣತಿ ವರದಿ ಅನುಷ್ಠಾನದ ಜ್ಞಾನೋದಯ ಆಗಿದೆ, ಸಂಪುಟ ಸಭೆ ಮುಂದೆ ತಂದು ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಪ್ರತಿಕ್ರಿಯೆಗಳನ್ನು ಗಮನಿಸಬೇಕು
ಜಾತಿ ಗಣತಿ ವರದಿ ಅನುಷ್ಠಾನ ಕುರಿತು ಡಿ.ಕೆ.ಶಿವಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು.
ರಾಜಕೀಯದ ಹೊರತಾಗಿ ನಡೆದುಕೊಳ್ಳಬೇಕಿದೆ, ರಾಜ್ಯದ ಎಲ್ಲ ವರ್ಗ, ಸಮುದಾಯಗಳಿಗೆ ನ್ಯಾಯ ಕೊಡಬೇಕು, ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳಿಗೂ ನ್ಯಾಯ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ಒಬ್ಬರಿಗೆ ನ್ಯಾಯ ಮತ್ತೊಬ್ಬರಿಗೆ ಅನ್ಯಾಯ ಆಗಬಾರದು, ನ್ಯಾಯಯುತವಾಗಿ ನಡೆದುಕೊಳ್ಳಬೇಕು, ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂಬುದು ಎಲ್ಲರ ಅಭಿಪ್ರಾಯ, ಮುಖ್ಯಮಂತ್ರಿ ಭಾವನಾತ್ಮಕ ರಾಜಕಾರಣ ಮಾಡುತ್ತಿರುವ ಭಾವನೆ ಎಲ್ಲರಲ್ಲೂ ಇದೆ ಎಂದರು.
ಒಂದು ಜಿಲ್ಲೆ 2 ಟೋಲ್
ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ರಾಜಕಾರಣ ಮಾತನಾಡಿಲ್ಲ, ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ 2 ಟೋಲ್‌ಗಳಿವೆ, ಶಿಕಾರಿಪುರ ತಾಲ್ಲೂಕಿನ ಟೋಲ್‌ನಿಂದ ರೈತರು, ಬಡವರಿಗೆ ಅನಾನುಕೂಲವಾಗಿದೆ, ಮೂರು ಜಿಲ್ಲೆಗಳ ಜನರು ಈ ಹೆದ್ದಾರಿ ಬಳಸುತ್ತಿದ್ದಾರೆ, ಒಂದು ಜಿಲ್ಲೆಯಲ್ಲಿ ಇರುವ ಎರಡು ಟೋಲ್‌ಗಳಲ್ಲಿ ಒಂದನ್ನು ವರ್ಗಾಯಿಸಿ ರೈತರು ಹಾಗೂ ಬಡವರಿಗೆ ಪ್ರಯೋಜನ ದೊರಕಿಸಿಕೊಡಲು ಮನವಿ ಮಾಡಿದ್ದು, ಶೀಘ್ರ ಅಧಿಕಾರಿಗಳ ಸಭೆ ಕರೆಯುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ರಾಜ್ಯಾಧ್ಯಕ್ಷನಾಗಿ ಪಕ್ಷ ಮುನ್ನಡೆಸುವುದರ ಜೊತೆಗೆ ನನ್ನ ಕ್ಷೇತ್ರದ ಸಮಸ್ಯೆಗಳಿಗೂ ಸ್ಪಂದಿಸಬೇಕಿದೆ, ಇದು ನನ್ನ ಕರ್ತವ್ಯ ಎಂದರು.