ಬೆಂಗಳೂರು:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನೊಂದು ವಾರದಲ್ಲಿ ಉಪಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಛತ್ತೀಸ್‌ಘಢ ವಿಧಾನಸಭೆಗಳಿಗೆ ನವೆಂಬರ್ ಅಂತ್ಯದೊಳಗೆ ಚುನಾವಣೆ ನಡೆಯಬೇಕಿದ್ದು, ಇದೇ ಸಂದರ್ಭದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ತೆರವಾಗಿರುವ 40ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ಜರುಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ಸಂಡೂರು, ಶಿಗ್ಗಾಂವ್ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ ಎಂದರು.
ಮುಖಂಡರ ಸಮಾಲೋಚನೆ
ಮುಂಬರುವ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು, ಇಂದು ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಕರೆದು ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 5 ಜಿಲ್ಲಾ ಪಂಚಾಯತ್, ಕ್ಷೇತ್ರ ಹಾಗೂ ಪಟ್ಟಣ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇವೆ, ಈ ಸಭೆಯಲ್ಲಿ ಹಳ್ಳಿ, ಹೋಬಳಿ, ಪಂಚಾಯತ್ ಮಟ್ಟದ ಮುಖಂಡರು ಬಂದಿದ್ದರು, ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು, ಅಭ್ಯರ್ಥಿ ಯಾರಾಗಬೇಕು ಎನ್ನುವುವ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದರು.
ಜೆಡಿಎಸ್-ಬಿಜೆಪಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕು, ಮಿತ್ರಪಕ್ಷ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಕೆಲಸ ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ.
ಜೆಡಿಎಸ್ ಭದ್ರಕೋಟೆ
ದೆಹಲಿ ಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದು, ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ, ಕಳೆದ ಎರಡು ಬಾರಿ ಜೆಡಿಎಸ್ ಗೆದ್ದಿದೆ, ಇದು ಜೆಡಿಎಸ್ ಭದ್ರಕೋಟೆ, ನಮ್ಮ ಸಂಘಟನೆಯಲ್ಲಿನ ಕೆಲವು ಲೋಪದೋಷಗಳಿಂದ ಹಿಂದೆ ಬಿದ್ದಿದ್ದೆವು.
2013ರಲ್ಲೂ ನಮಗೆ ಹೆಚ್ಚಿನ ಮತಗಳು ಬಂದಿದ್ದವು, ಚನ್ನಪಟ್ಟಣದಲ್ಲಿ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸಿದ್ದಾರೆ, ನಮ್ಮ ಸಂಘಟನೆ ದೃಷ್ಟಿಯಿಂದ ಚರ್ಚೆ ಮಾಡಿದ್ದೇವೆ, ಯಾವುದೇ ಸಮಸ್ಯೆ ಆಗದಂತೆ ಚುನಾವಣೆ ನಡೆಸುತ್ತೇವೆ ಎಂದರು.
ಜೆಡಿಎಸ್ ಯುವ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಗಬೇಕೆಂಬ ಒತ್ತಡ ಇರುವುದು ನಿಜ, ನಿಖಿಲ್ ಕುಮಾರಸ್ವಾಮಿ ಪರ ಶೇ.95 ನಾಯಕರು, ಮುಖಂಡರ ಒಲವಿದೆ, ಸನ್ನಿವೇಶ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಿದೆ.
ಕಾಂಗ್ರೆಸ್ ವಿರುದ್ಧ ಹೋರಾಟ
ನಿಖಿಲ್‌ರನ್ನು ಮಂಡ್ಯದಲ್ಲಿ ನಿಲ್ಲಿಸಿದಾಗ ಎಲ್ಲಾ ಪಕ್ಷಗಳು ಷಡ್ಯಂತ್ರ ಮಾಡಿ ಸೋಲಿಸಲಾಯಿತು, ಜೆಡಿಎಸ್ ಈಗ ಎನ್‌ಡಿಎ ಭಾಗ, ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು, ಯಾರೇ ನಿಂತು ಗೆದ್ದರೂ ಅದು ಎನ್‌ಡಿಎ ಗೆಲುವು, ಆ ಮೂಲಕ ಕಾಂಗ್ರೆಸ್ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ನಾವೂ ಕೈಜೋಡಿಸಿದಂತೆ ಆಗುತ್ತದೆ ಎಂದರು.
ಇನ್ನೊಂದು ವಾರದಲ್ಲಿ ಟಿಕೆಟ್ ಫೈನಲ್ ಆಗುತ್ತದೆ, ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು, ಕಾರ್ಯಕರ್ತರು ಸೇರಿ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮ ಮಾಡುತ್ತೇವೆ.
ಚನ್ನಪಟ್ಟಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪದೇ ಪದೆ ಭೇಟಿ ನೀಡುವುದರಿಂದ ಉಪಯೋಗ ಇಲ್ಲ, ಅವರು ಈ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಏನೆಂದು ಜನರಿಗೆ ಗೊತ್ತಿದೆ, ಚುನಾವಣೆ ಬಂದಿದೆ, ಅದಕ್ಕೆ ಪದೇ ಪದೆ ಬರುತ್ತಿದ್ದಾರೆ ಅಷ್ಟೇ, ಚುನಾವಣೆ ಮುಗಿದ ಮೇಲೆ ಶಿವಕುಮಾರ್ ಈ ಕಡೆ ತಲೆ ಹಾಕುವುದಿಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.