ಬೆಂಗಳೂರು:ರಾಮನಗರ ಜಿಲ್ಲೆ ಮೇಲಿನ ರಾಜಕೀಯ ಹಿಡಿತಕ್ಕೆ ಪೈಪೋಟಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರತಿಷ್ಠೆಯಾಗಿದೆ.
ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು ಪ್ರತಿಷ್ಠೆಯಾಗಿದ್ದರೂ, ಉಭಯ ನಾಯಕರಿಗೆ ತಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ದೊರೆಯದೇ ಗೊಂದಲದಲ್ಲಿದ್ದಾರೆ.
ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮುನ್ನ ಕುಮಾರಸ್ವಾಮಿ ತಮ್ಮ ಪಕ್ಷದಿಂದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುವ ರಣೋತ್ಸಾಹದಲ್ಲಿದ್ದರು.
ನಿರ್ಧಾರ ಬದಲಾವಣೆ
ಆದರೆ, ಶಿವಕುಮಾರ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದರೆ, ಮತ್ತೊಂದೆಡೆ ಮೈತ್ರಿ ಕೂಟದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್, ಪಕ್ಷದಿಂದ ಟಿಕೆಟ್ ಸಿಗದಿದ್ದರೂ ಸ್ಪರ್ಧೆಗಿಳಿಯಲು ಮುಂದಾಗಿರುವುದು ಕುಮಾರಸ್ವಾಮಿ ನಿರ್ಧಾರ ಬದಲಾವಣೆಗೆ ಕಾರಣವಾಗಿದೆ.
ಚುನಾವಣೆಗೂ ಮುನ್ನ ತಾವೇ ಅಭ್ಯರ್ಥಿ ಎನ್ನುತ್ತಿದ್ದ ಶಿವಕುಮಾರ್, ಇದೀಗ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದ್ದು, ಪಕ್ಷದ ಕಾರ್ಯಕರ್ತರೊಬ್ಬರನ್ನು ಅಭ್ಯರ್ಥಿಯನ್ನಾಗಿಸಲು ಮುಂದಾಗಿದ್ದಾರೆ.
ಯೋಗೇಶ್ವರ್ ನಿರ್ಧಾರದ ನಂತರ ಕುಮಾರಸ್ವಾಮಿ, ತಮ್ಮ ಪತ್ನಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ನಿಖಿಲ್ ಉತ್ಸಾಹ ತೋರುತ್ತಿಲ್ಲ
ಒಂದೆಡೆ, ಯುವ ಜೆಡಿಎಸ್ ಅಧ್ಯಕ್ಷ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಬೇಕೆಂಬ ಇಚ್ಛೆ ಇದೆಯಾದರೂ, ನಿಖಿಲ್ ಉತ್ಸಾಹ ತೋರುತ್ತಿಲ್ಲ.
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ಚುನಾವಣೆಗೆ ರಾಮನಗರದಿಂದಲೇ ಸ್ಪರ್ಧಿಸುತ್ತೇನೆ, ಈಗ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸೋಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲುಂಟಾದರೆ ರಾಮನಗರ ಜಿಲ್ಲಾ ರಾಜಕಾರಣದ ಮೇಲಿನ ಹಿಡಿತ ತಪ್ಪುತ್ತದೆ ಎಂಬ ಅನಿಸಿಕೆಯಲ್ಲಿರುವ ಕುಮಾರಸ್ವಾಮಿ, ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸಿ ಕ್ಷೇತ್ರ ಉಳಿಸಿಕೊಳ್ಳುವ ಚಿಂತನೆಯಲ್ಲಿದ್ದಾರೆ.
ಪಕ್ಷದಲ್ಲಿ ಒಲವು ಇಲ್ಲ
ಈ ಮೊದಲು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದರು, ಆದರೆ, ಅವರಿಗೆ ಪಕ್ಷದಲ್ಲಿ ಒಲವು ವ್ಯಕ್ತವಾಗಲಿಲ್ಲ.
ಯೋಗೇಶ್ವರ್ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನೂ ಎದುರಿಸುವ ಶಕ್ತಿ ಜಯಮುತ್ತು ಅವರಲ್ಲಿ ಇಲ್ಲ ಎಂಬ ಭಾವನೆ ಪಕ್ಷದ ಕಾರ್ಯಕರ್ತರಿಂದ ವ್ಯಕ್ತವಾದ ಕಾರಣ ಕುಮಾರಸ್ವಾಮಿ ಅಭ್ಯರ್ಥಿ ಬದಲಾವಣೆಗೆ ಮುಂದಾದರು ಎನ್ನಲಾಗಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ಕ್ಷೇತ್ರದ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಒಂದೆರಡು ದಿನದಲ್ಲಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ.