ಬೆಂಗಳೂರು:ಮುಡಾ ಬಿಡಿ ನಿವೇಶನ ಹಂಚಿಕೆ ಹಾಗೂ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಸಿದ ದಾಳಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ.
ನ್ಯಾಯಾಲಯದ ಆದೇಶದ ನಂತರ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸೇರಿದಂತೆ ಐವರ ವಿರುದ್ಧ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿರುವ ಬೆನ್ನಲ್ಲೇ ಇ.ಡಿ. ದಾಳಿ, ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಮೂರು ಮತ್ತು ನಾಲ್ಕನೇ ಆರೋಪಿಗಳಿಗೆ ನೋಟಿಸ್ ನೀಡಿ ವಿವರಣೆ ಪಡೆದಿರುವುದಲ್ಲದೆ, ಮುಡಾಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ದೇವರಾಜ್ ಮನೆ ಮೇಲೆ ಇ.ಡಿ. ದಾಳಿ
ಲೋಕಾಯುಕ್ತ ಪ್ರಾರಂಭಿಕ ಹಂತದ ತನಿಖೆ ನಡೆಸುವ ಸಂದರ್ಭದಲ್ಲೇ ಆರೋಪಿ ದೇವರಾಜ್ ಅವರ ಮೈಸೂರು ಹಾಗೂ ಬೆಂಗಳೂರಿನ ಮನೆ ಮೇಲೆ ಇ.ಡಿ. ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ವಶಪಡಿಸಿಕೊಂಡಿದೆ.
ಮುಡಾ ಕಚೇರಿಯಲ್ಲಿ ಲಭ್ಯವಾಗುವ ದಾಖಲೆ ಹಾಗೂ ಉಳಿದ ಆರೋಪಿಗಳು ಮತ್ತು ಅಧಿಕಾರಿಗಳಿಂದ ಸಾಕ್ಷ್ಯ ದಾಖಲೆಗಳನ್ನು ಸಂಗ್ರಹಿಸಿದ ನಂತರ ಇ.ಡಿ., ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ವಿವರಣೆ ಪಡೆಯಲಿದೆಯಂತೆ.
ಅಧಿಕಾರಿಗಳಿಗೂ ನೋಟಿಸ್
ಸಿದ್ದರಾಮಯ್ಯ ಜೊತೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮುಡಾದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೂ ನೋಟಿಸ್ ನೀಡಿ ಮಾಹಿತಿ ಪಡೆಯಲಿದ್ದಾರಂತೆ.
ಮೈಸೂರಿನಲ್ಲಿ ಇ.ಡಿ. ದಾಳಿ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪಂಚಮಸಾಲಿ ಸಮುದಾಯದ ಸ್ವಾಮೀಜಿ ಹಾಗೂ ಆ ಸಮಾಜಕ್ಕೆ ಸೇರಿದ ಮುಖಂಡರೊಂದಿಗೆ 2ಎ ಮೀಸಲಾತಿ ಕುರಿತ ಸಭೆ ನಡೆಸುತ್ತಿದ್ದರು.
ಇದೇ ವೇಳೆ ಇ.ಡಿ. ದಾಳಿ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿ ಗಮನಕ್ಕೆ ತಂದರಾದರೂ ಆ ಬಗ್ಗೆ ಹೆಚ್ಚು ವಿವರಣೆಯನ್ನು ಸಭೆಯಲ್ಲಿ ಪಡೆಯದೆ ನಂತರ ತಮ್ಮ ವ್ಯಾಪ್ತಿಗೆ ಬರುವ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ.
ತನಿಖೆಗೆ ಚುರುಕು
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ, ಇ.ಡಿ. ಇತ್ತ ಮುಡಾ ಹಗರಣದ ತನಿಖೆಗೆ ಚುರುಕು ನೀಡಿದೆ.
ಮುಡಾ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ. ಕಳೆದ ಎರಡು-ಮೂರು ವಾರಗಳ ಹಿಂದೆಯೇ ಪ್ರಕರಣ ದಾಖಲು ಮಾಡಿಕೊಂಡಿತ್ತು.
ಇದರ ಜೊತೆಗೆ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ದಾಖಲೆ ಸಹಿತ ದೂರು ನೀಡಿದ್ದರು.
ಏಕಾಏಕಿ ದಾಳಿ
ದೂರಿನ ನಂತರ ಇ.ಡಿ. ಆಂತರಿಕವಾಗಿ ಮಾಹಿತಿ ಸಂಗ್ರಹಿಸಿ ಇಂದು ಏಕಾಏಕಿ ದಾಳಿ ಮಾಡಿದೆ.
ಇ.ಡಿ. ಮುಡಾ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಮುಖ್ಯಮಂತ್ರಿ ಅವರು ತಮ್ಮ ಪತ್ನಿ ಪಾರ್ವತಿ ಹೆಸರಿನಲ್ಲಿ ಪಡೆದಿದ್ದ ೧೪ ನಿವೇಶನಗಳನ್ನು ಹಿಂತಿರುಗಿಸಿದ್ದರು.
ನಿವೇಶನ ಹಿಂತಿರುಗಿಸಿದ ಕೆಲವೇ ದಿನಗಳಲ್ಲಿ ಮುಡಾ ಅಧ್ಯಕ್ಷರಾಗಿದ್ದ ತಮ್ಮ ಆಪ್ತ ಮರಿಗೌಡ ಅವರ ರಾಜೀನಾಮೆ ಪಡೆದು ತಕ್ಷಣವೇ ಅಂಗೀಕಾರ ಮಾಡಿಸಿದ್ದರು.