ಬೆಂಗಳೂರು:ಮಿತ್ರ ಪಕ್ಷ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಬಿಜೆಪಿ ಮುಖಂಡರ ಜೊತೆಗೂಡಿ ನಾಳೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ.
ಕಳೆದ ಮೂರು ದಿನಗಳಿಂದ ಎನ್‌ಡಿಎ ಅಭ್ಯರ್ಥಿ ಆಯ್ಕೆಗೆ ನಡೆದ ಕಸರತ್ತಿನ ವೇಳೆ, ತಾವು ಸ್ಪರ್ಧಿಸುವುದಿಲ್ಲ ಎಂದಿದ್ದ ನಿಖಿಲ್ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಯಿತು.
ನಿಖಿಲ್ ಕಣಕ್ಕೆ ಬಿಜೆಪಿ ಪಟ್ಟು
ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಿಖಿಲ್ ಅವರನ್ನೇ ಕಣಕ್ಕಿಳಿಸಬೇಕೆಂದು ಹಿಡಿದ ಪಟ್ಟಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರುಗಳು ಮಣಿದಿದ್ದಾರೆ.
ಯಡಿಯೂರಪ್ಪ ಮನೆಯಲ್ಲಿ ಇಂದು ಮಧ್ಯಾನ್ಹ ಎನ್‌ಡಿಎ ಮುಖಂಡರು ಸಭೆ ನಡೆಸಿದ ನಂತರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ದೋಸ್ತಿ ಅಭ್ಯರ್ಥಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪಕ್ಷದ ಆಶೀರ್ವಾದವಿದೆ, ನಾವೆಲ್ಲಾ ಮುಖಂಡರು ಒಗ್ಗಟ್ಟಾಗಿ ಉಪಚುನಾವಣೆಯಲ್ಲಿ ಹೋರಾಟ ಮಾಡಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದರು.
ಸಿ.ಪಿ.ಯೋಗೇಶ್ವರ್ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಕುರಿತು ಈಗ ಪ್ರಸ್ತಾಪ ಅಪ್ರಸ್ತುತ ಫಲಿತಾಂಶದ ನಂತರ ನಾನೇ ಮಾತನಾಡುತ್ತೇನೆ ಎಂದರು.
ಯೋಗೇಶ್ವರ್ ಸೋಲಿಗೆ ರಣತಂತ್ರ
ಇದಕ್ಕೂ ಮುನ್ನ ನಡೆದ ಬೆಳವಣಿಗೆಯಲ್ಲಿ, ಚುನಾವಣಾ ಹೊಸ್ತಿಲಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಸೋಲಿಸಲು ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತರಿಂದ ಸಾಧ್ಯವಿಲ್ಲ, ನಿಖಿಲ್ ಅವರನ್ನೇ ಕಣಕ್ಕಿಳಿಸುವಂತೆ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಟ್ಟುಹಿಡಿದರು.
ಇದೇ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸಿ ಎಂದು ಸಲಹೆ ಮಾಡಿದರು.
ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ ನಿನ್ನೆ ತಡೆರಾತ್ರಿವರೆಗೂ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಇಂದು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸುದೀರ್ಘ ಸಮಾಲೋಚನೆ ಮಾಡಿದರು.
ಒಕ್ಕೊರಲಿನ ಒತ್ತಾಯ
ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಕಾರ್ಯಕರ್ತರು, ನಿಖಿಲ್ ಅವರನ್ನೇ ಕಣಕ್ಕಿಳಿಸುವಂತೆ ಒತ್ತಾಯ ಮಾಡಿದ್ದಲ್ಲದೆ, ಮುಖಂಡರುಗಳು ಬೇರೆ ಹೆಸರನ್ನು ಪ್ರಸ್ತಾಪಿಸಲೂ ಅವಕಾಶ ನೀಡಲಿಲ್ಲ.
ಕಾರ್ಯಕರ್ತರ ಸಭೆ ನಂತರ ಪುತ್ರ ನಿಖಿಲ್ ಜೊತೆಗೂಡಿ ಯಡಿಯೂರಪ್ಪ ಮನೆಗೆ ತೆರಳಿ, ಅಲ್ಲಿ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ತದನಂತರ ಯಡಿಯೂರಪ್ಪ ಅವರೇ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂದು ಘೋಷಿಸಿದರು.
ಚನ್ನಪಟ್ಟಣ ಪ್ರತಿಷ್ಠೆ ಕ್ಷೇತ್ರ
ಕುಮಾರಸ್ವಾಮಿಗಿಂತ ಯಡಿಯೂರಪ್ಪ ಕುಟುಂಬ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ಯೋಗೇಶ್ವರ್ ಪಕ್ಷ ಬಿಡುವುದಕ್ಕೂ ಮುನ್ನ ಬಿಜೆಪಿ ನಾಯಕರಲ್ಲೇ ಗೊಂದಲ ಉಂಟು ಮಾಡಿ ಕಾಂಗ್ರೆಸ್‌ಗೆ ಅನುಕೂಲವಾಗುವ ಪರಿಸ್ಥಿತಿ ನಿರ್ಮಿಸಿದ್ದರು.
ತಾವು ಅಧಿಕಾರದಿಂದ ಕೆಳಗಿಳಿಯಲು ತೆರೆಮರೆಯಲ್ಲಿ ಯೋಗೇಶ್ವರ್ ಮಾಡಿದ್ದ ಯತ್ನವನ್ನು ಯಡಿಯೂರಪ್ಪ ಇಂದೂ ಮರೆತಿಲ್ಲ.
ಈ ಪಕ್ಷಾಂತರಿ ಕಲಾವಿದನಿಗೆ ಚುನಾವಣೆಯಲ್ಲಿ ಬುದ್ಧಿ ಕಲಿಸಲೇಬೇಕು, ನಾನೇ ಇದರ ನಾಯಕತ್ವ ವಹಿಸಿಕೊಳ್ಳುತ್ತೇನೆ, ನೀವು ಮುನ್ನಡೆಯಿರಿ ಎಂದು ಕುಮಾರಸ್ವಾಮಿ ಹಾಗೂ ನಿಖಿಲ್ ಅವರಿಗೆ ಯಡಿಯೂರಪ್ಪ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.