ಬೆಂಗಳೂರು:ಸಿದ್ದರಾಮಯ್ಯ ಸಂಪುಟದ ಪ್ರಭಾವೀ ಸಚಿವರ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಇಂದು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದೆ.
ಮೈಸೂರು ನಗರಾಭಿವೃದ್ಧಿ ಬಿಡಿ ನಿವೇಶನಗಳ ಹಂಚಿಕೆ ಹಾಗೂ ಅಲ್ಲಿನ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಪಡೆಯಲು ಬೆಂಗಳೂರು, ಮಂಡ್ಯ ಹಾಗೂ ಮೈಸೂರಿನ ಎಂಟು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದೆ.
ದಾಖಲೆಗಳ ವಶ
ಸಚಿವರ ಆಪ್ತರು ಮತ್ತು ಬಿಲ್ಡರ್ ಆಗಿರುವ ಮಂಜುನಾಥ್ ಅವರ ಜೆ.ಪಿ.ನಗರದ ಡಾಲರ‍್ಸ್ ಕಾಲೋನಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಸಂಜೆವರೆಗೂ ತಪಾಸಣೆ ನಡೆಸಿ ಕೆಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆಂದು ಹೇಳಲಾಗಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇ.ಡಿ. ಮತ್ತು ಆದಾಯ ತೆರಿಗೆ (ಐಟಿ) ಇಲಾಖೆ ನಗರದಲ್ಲಿ ಗುತ್ತಿಗೆದಾರ ಹಾಗೂ ಕಟ್ಟಡ ವಿನ್ಯಾಸಕಾರರ ನಿವಾಸಗಳ ಮೇಲೆ ಪ್ರತ್ಯೇಕ ದಾಳಿ ನಡೆಸಿ 80 ಕೋಟಿ ರೂ. ವಶಪಡಿಸಿಕೊಂಡಿತ್ತು.
ಹಣ ಕೈ ಬದಲಾವಣೆ
ವಿನ್ಯಾಸಕಾರನ ಮನೆ ಹಾಗೂ ಆತನ ಸ್ನೇಹಿತನ ಮನೆಯಲ್ಲಿ ದೊರೆತ ಹಣ ಮುಡಾ ಗುತ್ತಿಗೆ ನೀಡುವ ಸಂದರ್ಭದಲ್ಲಿ ಕೈ ಬದಲಾವಣೆ ಆಗಿದೆ ಎಂದು ಹೇಳಲಾಗುತ್ತಿತ್ತು.
ಇದರ ಆಧಾರದ ಮೇಲೆ ಇ.ಡಿ. ತನಿಖೆ ಮುಂದುವರೆಸಿ ಇಂದು 8 ಕಡೆ ದಾಳಿ ನಡೆಸಿದೆ.
ಮುಡಾದಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಕೆಎಎಸ್ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಇದುವರೆಗೆ ದೃಢಪಟ್ಟಿಲ್ಲ.
ಬಿಡಿ ನಿವೇಶನಗಳ ಹಂಚಿಕೆ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಅಕ್ಟೋಬರ್ 18ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಸತತ 48 ಗಂಟೆಗಳ ಕಾಲ ಕಡತಗಳ ಪರಿಶೀಲನೆ ಮಾಡಿತ್ತು.
ಕಡತಗಳನ್ನು ತರಲು ಆದೇಶ
ಕಡತ ಪರಿಶೀಲನೆ ನಂತರ ಇ.ಡಿ., ತನಗೆ ಬೇಕಾದ ಕಡತಗಳನ್ನು ಕೊಂಡೊಯ್ದು ಆ ನಂತರ ಪ್ರಾಧಿಕಾರದ ಕೆಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಕೆಲವು ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ಕೇಂದ್ರ ಕಚೇರಿಗೆ ತರುವಂತೆ ಆದೇಶಿಸಿತ್ತು.
ತನಿಖೆಯ ಮುಂದಿನ ಭಾಗವಾಗಿ ಇಂದು ಇ.ಡಿ. ಅಧಿಕಾರಿಗಳು ಪ್ರಭಾವೀ ಸಚಿವರ ಆಪ್ತರು ಮತ್ತು ಬಿಲ್ಡರ್‌ಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದೆ.
ಈ ದಾಳಿ ವೇಳೆ ರಾಜ್ಯ ಸರ್ಕಾರದ ಯಾವುದೇ ಸೇವೆ ಬಳಸಿಕೊಳ್ಳದೆ, ತಮ್ಮ ಭದ್ರತೆಗೆ ಕೇಂದ್ರದ ಕೈಗಾರಿಕಾ ಮೀಸಲು ಪಡೆಯನ್ನು ನಿಯೋಜಿಸಿಕೊಂಡಿತ್ತು.