ರೈತರ ಪಿತ್ರಾರ್ಜಿತ ಸ್ವತ್ತು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಣೆ
ಬೆಂಗಳೂರು:ರೈತರ ಪಿತ್ರಾರ್ಜಿತ ಸ್ವತ್ತುಗಳನ್ನು ವಕ್ಫ್ ಬೋರ್ಡ್ ಆಸ್ತಿ ಎನ್ನುವ ಮೂಲಕ ರಾಜ್ಯ ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋ ರಾತ್ರಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬುದಾಗಿ ಘೋಷಿಸುತ್ತಿದ್ದು, ಸರ್ಕಾರದ ಈ ಅನ್ಯಾಯದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಬಡ ರೈತರು ಬೀದಿಗೆ
ರಾಜ್ಯ ಸರ್ಕಾರ ಇಂತಹ ಕ್ರಮದಿಂದ ಬಡ ರೈತರು ಬೀದಿಗೆ ಬೀಳುವಂತಾಗಿದೆ, ತಮ್ಮ ಪಕ್ಷ ರೈತರ ಪರ ಹೋರಾಟಕ್ಕೆ ಮುಂದಾದರೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಮಾಡುತ್ತಾರೆ.
ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ, ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಮಾಡುತ್ತಾ ಬಂದಿದೆ, ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿದೆ, ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ.
ಸಚಿವರೇ ಒಪ್ಪಿಕೊಂಡಿದ್ದಾರೆ
120 ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಸಚಿವರು ಒಪ್ಪಿಕೊಂಡಿದ್ದಾರೆ, ಇದಕ್ಕೆ ಬಿಜೆಪಿ ಕಾರಣವೇ, ತಮ್ಮ ಪಕ್ಷ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಸರ್ಕಾರದ ಅಕ್ರಮದಿಂದ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಬೀದಿಗೆ ಬರಬೇಕಾಗುತ್ತಿತ್ತು ಎಂದರು.
ಟಾಸ್ಕ್ ಫೋರ್ಸ್ ಮಾಡಿದ್ದೇವೆ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಿ ಎಂಬ ಆಟವನ್ನು ಕಾಂಗ್ರೆಸ್ ಶುರು ಮಾಡಿದೆ.
ಮಾಜಿ ಉಪಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ತಂಡ ವಿಜಯಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.
ಬಿಜೆಪಿ ಸಂಪೂರ್ಣ ಸಹಕಾರ
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ರೈತರ ಪರ ಇದ್ದು, ಸಮಸ್ಯೆ ಪರಿಹಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ, ಕಾನೂನಿನ ಸಹಾಯ ಸೇರಿ ಯಾವುದೇ ರೀತಿಯ ಸಹಕಾರ ನೀಡಲಿದೆ ಎಂದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಇರಬಹುದು, ಅವರನ್ನು ಗೆಲ್ಲಿಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ.
ಕ್ಷೇತ್ರ ಗೆಲ್ಲಲು ಸಾಧ್ಯವಿಲ್ಲ
ಈ ವಯಸ್ಸಿನಲ್ಲೂ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಉತ್ಸಾಹ ಮೆಚ್ಚಿಕೊಳ್ಳಬೇಕು, ಯುವಕರಿಗೂ ಪ್ರೇರಣೆಯಾಗಿದೆ, ಅವರು ಪ್ರಚಾರ ಮಾಡುತ್ತಾರೆಂದರೆ ಕಾಂಗ್ರೆಸ್‌ನವರಿಗೆ ಆತಂಕ, ದೇವೇಗೌಡರು ಬಂದರೆ ಕ್ಷೇತ್ರ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯ ಅರಿವಾಗಿದೆ, ಅದಕ್ಕಾಗೇ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರಾಮಾಣಿಕತೆ ಹಾಗೂ ಕಾಂತರಾಜ್ ವರದಿ ಕುರಿತು ಗಂಭೀರತೆ ಇದ್ದಿದ್ದರೆ ಬಹಳ ಹಿಂದೆಯೇ ಕ್ರಮ ಕೈಗೊಳ್ಳುತ್ತಿದ್ದರು.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಈ ವಿಚಾರದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದೆ, ಮುಖ್ಯಮಂತ್ರಿ ಪ್ರಾಮಾಣಿಕತೆ ಹೊಂದಿಲ್ಲ ಎಂಬುದು ನನ್ನ ಭಾವನೆ, ಉಪಚುನಾವಣೆ ಹಿನ್ನೆಲೆಯಲ್ಲಿ ಒಳಮೀಸಲಾತಿ ಪ್ರಸ್ತಾಪ ಮಾಡುತ್ತಿದ್ದಾರೆಯೇ ಹೊರತು ಬದ್ಧತೆ ಇಲ್ಲ ಎಂದರು.