ಪ್ರತಿ ಕ್ಷೇತ್ರಕ್ಕೆ 10 ಸಚಿವರು ಸೇರಿ 300 ಮಂದಿ ನಿಯೋಜನೆ
ಬೆಂಗಳೂರು:ಹಿಂಗಾರು ಮಳೆಯಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅತಿವೃಷ್ಟಿ ಎದುರಿಸುತ್ತಿರುವ ರೈತರು ಮತ್ತು ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ, ಆದರೆ, ವಿಧಾನಸಭಾ ಉಪಚುನಾವಣೆಗಾಗಿ ಪ್ರತಿ ಕ್ಷೇತ್ರಕ್ಕೆ 10 ಸಚಿವರು, ಸಂಸದರು, ಶಾಸಕರು, ಪ್ರಮುಖರು ಸೇರಿದಂತೆ 250 ರಿಂದ 300 ಮಂದಿಯನ್ನು ಕಾಂಗ್ರೆಸ್ ನಿಯೋಜಿಸಿದೆ.
ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಪುಟದ ಎಲ್ಲಾ ಸಚಿವರು, ಶಾಸಕರು ಮೂರೂ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂಬ ಹೊಣೆ ನೀಡಿದ್ದಾರೆ.
ಮತದಾರರ ಮನವೊಲಿಕೆ ಯತ್ನ
ಪಕ್ಷದ ಈ ನಿರ್ಧಾರದಿಂದ ಉಪಚುನಾವಣೆ ನಡೆಯುತ್ತಿರುವ ಪ್ರತಿ ಕ್ಷೇತ್ರದಲ್ಲೂ ಪಕ್ಷದಿಂದ ನಿಯೋಜಿಸಲ್ಪಟ್ಟವರು ತಮ್ಮ ಐಶಾರಾಮಿ ಕಾರುಗಳಲ್ಲಿ ಧೂಳೆಬ್ಬಿಸುತ್ತಾ ಮತದಾರರ ಮನವೊಲಿಸಲಿದ್ದಾರೆ.
ಪ್ರತಿ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಇಂತಿಷ್ಟು ಮಂದಿಯೆಂದು ಗುರುತಿಸಿ ನಿಯೋಜಿಸಲಾಗಿದೆ.
ಪಕ್ಷದ ಆದೇಶಕ್ಕೆ ತಲೆಬಾಗಿ ತಕ್ಷಣವೇ ತಮಗೆ ವಹಿಸಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡಾರ ಹೂಡಿ ಮತದಾರರನ್ನು ಓಲೈಸುವ ಕೆಲಸ ಮಾಡಬೇಕು.
ಸಮುದಾಯಗಳ ಮುಖಂಡರು
ಒಂದು ಪಂಚಾಯತ್ ಇಲ್ಲವೇ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಸಮುದಾಯಗಳ ಮುಖಂಡರುಗಳನ್ನೇ ನಿಯೋಜಿಸಲಾಗಿದೆ.
ನಿಯೋಜಿತಗೊಂಡ ಮುಖಂಡರು ತಾವು ದೈನಂದಿನ ವರದಿಯನ್ನು ಪ್ರತಿನಿತ್ಯ ಕೆಪಿಸಿಸಿ ಕಚೇರಿಗೆ ಚಿತ್ರಗಳ ಸಮೇತ ಕಳುಹಿಸಬೇಕು.
ಎಲ್ಲಿಯಾದರೂ ಪಕ್ಷಕ್ಕೆ ಹಿನ್ನಡೆ ಇದೆ, ಅಥವಾ ವಿರೋಧಿಗಳು ಮೇಲುಗೈ ಸಾಧಿಸುತ್ತಿದ್ದಾರೆ, ಮತದಾರರು ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಇದ್ದರೆ, ಅಂತಹ ವಿಷಯಗಳನ್ನು ಕ್ಷೇತ್ರದ ಉಸ್ತುವಾರಿ ಸಚಿವರಿಗೆ ವರದಿ ನೀಡಿ ತಕ್ಷಣ ಕ್ರಮಕ್ಕೆ ಮುಂದಾಗಬೇಕು.
ಕೆಪಿಸಿಸಿ ಸೂಚನೆ
ಸಚಿವರಾದ ಕೆ.ಎಚ್.ಮುನಿಯಪ್ಪ, ಜಮೀರ್ ಅಹಮದ್ ಖಾನ್, ಡಾ.ಜಿ.ಪರಮೇಶ್ವರ್ ಮಾತ್ರ ಮೂರೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲು ಕೆಪಿಸಿಸಿ ಸೂಚಿಸಿದೆ.
ಈ ಉಪಚುನಾವಣೆ ಮುಂದಿನ ರಾಜ್ಯ ರಾಜಕೀಯಕ್ಕೆ ಭವಿಷ್ಯ ರೂಪಿಸುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಆದೇಶಿಸಿದೆ.
ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕಳೆದ ಭಾನುವಾರ, ಉಪಚುನಾವಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಶಿವಕುಮಾರ್, ಸಚಿವರು ಮತ್ತು ಶಾಸಕರೊಂದಿಗೆ ಚರ್ಚೆ ನಡೆಸಿದ ನಂತರ ಕೆಪಿಸಿಸಿ ಈ ನೇಮಕಾತಿ ಮಾಡಿದೆ.
ಮುಜುಗರ ಮಾಡಬಾರದು
ಕ್ಷೇತ್ರಕ್ಕೆ ತೆರಳಿದ ಮುಖಂಡರು ಮತ್ತು ಕಾರ್ಯಕರ್ತರು ಮತದಾರರೊಂದಿಗೆ ಬೆರೆಯಬೇಕು, ಎಲ್ಲಿಯೂ ಅಭ್ಯರ್ಥಿ ಮತ್ತು ಪಕ್ಷಕ್ಕೆ ಮುಜುಗರ ಆಗುವಂತಹ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಬಾರದೆಂದು ಪಕ್ಷ ಸ್ಪಷ್ಟ ಸಂದೇಶ ನೀಡಿದೆ.
ಪ್ರತಿ ಕ್ಷೇತ್ರದಲ್ಲೂ ಕೆಪಿಸಿಸಿ ಕ್ಯಾಂಪ್ ಕಚೇರಿ ತೆರೆಯಲಿದೆ, ಅಲ್ಲಿ, ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲು ವಕೀಲರ ತಂಡ, ಸಾಮಾಜಿಕ ಮಾಧ್ಯಮ ತಂಡ ಕಾರ್ಯನಿರ್ವಹಿಸಲಿವೆ.
ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ಸುರ್ಜೇವಾಲ ಮೂರೂ ಕ್ಷೇತ್ರಗಳಲ್ಲೂ ಪ್ರಚಾರ ಮಾಡಲಿದ್ದು, ಅವರು ಯಾವ ಕ್ಷೇತ್ರದಲ್ಲಿ, ಯಾವ ದಿನ ಪ್ರಚಾರ ಮಾಡುವರೆಂಬ ಮಾಹಿತಿಯನ್ನು ಕೆಪಿಸಿಸಿ ನೀಡಲಿದೆ.