ಬೆಂಗಳೂರು:ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಬರುವ ಸೋಮವಾರದಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ.
ನವೆಂಬರ್ 4ರಿಂದ 11ರವರೆಗೆ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಬಹುತೇಕ ಗ್ರಾಮಗಳಿಗೆ ಭೇಟಿ ನೀಡಿ ನಿಖಿಲ್ ಪರ ಮತ ಯಾಚಿಸಲಿದ್ದಾರೆ.
ಕುಮಾರಸ್ವಾಮಿಗೆ ಬಿಜೆಪಿ ಸಾಥ್
ನಿಖಿಲ್ ಪರ ಈಗಾಗಲೇ ಅವರ ತಂದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕ್ಷೇತ್ರದಲ್ಲಿ ಬಿಡಾರ ಹೂಡಿ ಬಿರುಸಿನ ಪ್ರಚಾರ ಕೈಗೊಂಡಿದ್ದು ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಾಥ್ ಕೊಟ್ಟಿದ್ದಾರೆ.
ದೇವೇಗೌಡರು ನಡೆದುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಅವರಿಗಾಗೇ ವಿಶೇಷವಾಗಿ ಸಿದ್ಧಪಡಿಸಿದ ವಾಹನದ ಮೂಲಕ ಮತಯಾಚನೆ ಮಾಡಲಿದ್ದಾರೆ.
ಆಂಬುಲೆನ್ಸ್‌ನಲ್ಲಿ ಬಂದು ಮೊಮ್ಮಗನ ಪರ ದೇವೇಗೌಡರು ಪ್ರಚಾರ ಮಾಡುತ್ತಾರಂತೆ ಎಂದು ಮಾಜಿ ಸಂಸದ, ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಸುರೇಶ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.
ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಚುನಾವಣಾ ಪ್ರಚಾರ ವೇಳೆ ಸುರೇಶ್ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದರು.
ಕಾಂಗ್ರೆಸ್ ಪ್ರಾಬಲ್ಯ ಕಡೆ ಪ್ರಚಾರ
ಇದಕ್ಕೆ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರೂ, ದೇವೇಗೌಡರು ಟೀಕೆಗೆ ಸ್ಪಂದಿಸಿರಲಿಲ್ಲ, ಬದಲಿಗೆ ಕಾಂಗ್ರೆಸ್ ಪ್ರಾಬಲ್ಯ ಇರುವ ಕಡೆಗಳಲ್ಲಿ ಮೊದಲ ಭಾಗವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.
ಎಂಟು ದಿನಗಳ ಕಾಲ ಬೆಳಗ್ಗಿನಿಂದ ಸಂಜೆವರೆಗೂ ಪ್ರಚಾರ ಮಾಡಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚಿಸಿ ಸತತ ಸೋಲುಂಡಿರುವ ನಿಖಿಲ್ ಗೆಲುವಿಗೆ ದೇವೇಗೌಡರು ಈ ಇಳಿವಯಸ್ಸಿನಲ್ಲೂ ರಾಜಕೀಯಕ್ಕೆ ಧುಮುಕಿದ್ದಾರೆ.