ಸಂಡೂರು:ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ನನ್ನನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳ ಉಪಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಸಂದರ್ಭದಲ್ಲಿ, ನನ್ನ ಮೇಲೆ ಇಲ್ಲಸಲ್ಲದ, ಸುಳ್ಳು ಕೇಸ್ ಹಾಕಿಸಿ ಷಡ್ಯಂತ್ರ ನಡೆಸುತ್ತಿದ್ದಾರೆ.
ಅನ್ಯಾಯ ಟೀಕಿಸಿದ್ದಕ್ಕೆ ಪ್ರತಿಫಲ
ನಾನು ನಿರಂತರವಾಗಿ ಈ ಇಬ್ಬರು ನಾಯಕರ ನೀತಿ ಮತ್ತು ಸುಳ್ಳುಗಳನ್ನು ಹಾಗೂ ರಾಜ್ಯಕ್ಕೆ ಅವರು ಮಾಡುತ್ತಿರುವ ಅನ್ಯಾಯವನ್ನು ಟೀಕಿಸಿದ್ದಕ್ಕೆ ನನಗೆ ಇಂತಹ ಪ್ರತಿಫಲ ದೊರೆತಿದೆ.
ನಾನು ಇವರುಗಳ ಯಾವ ಷಡ್ಯಂತ್ರಕ್ಕೂ ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ, ನಮ್ಮ ಸರ್ಕಾರ ಇನ್ನೂ ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ.
ಮಹಾರಾಷ್ಟ್ರದಲ್ಲಿ ತಮ್ಮ ಕಿಚಡಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಕರ್ನಾಟಕ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಬಿಜೆಪಿ ಸರಣಿ ಸುಳ್ಳು
ಬಿಜೆಪಿ ಮಹಾರಾಷ್ಟ್ರದ ಜನರನ್ನು ಸರಣಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ, ’ವಾದಾ ದಿಯಾ: ಪೂರಾ ಕಿಯಾ’ ಎಂದು ಅವರ ಸುಳ್ಳು ಜಾಹೀರಾತಿಗೆ ಕಿಡಿ ಕಾರಿದರು.
ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮತನಾಡಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಭರವಸೆ ನೀಡಿತ್ತು, ಅದು ಈಡೇರಿಸಲಾಗಿದೆ, ಯೋಜನೆಯನ್ನೇ ಇನ್ನೂ ಆರಂಭಿಸದೆ, ವಂಚಿಸಿದೆ ಎಂಬ ಅರ್ಥದಲ್ಲಿ ಪರಮ ಸುಳ್ಳಿನ ಜಾಹೀರಾತುಗಳನ್ನು ಬಿಜೆಪಿ ಪುಟಗಟ್ಟಲೆ ನೀಡುತ್ತಿದೆ.
ಬಿಜೆಪಿಯವರಿಗೆ ಸುಳ್ಳೇ ಮನೆದೇವರು, ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿವೆ.
ಒಂದೆರಡು ದಿನದಲ್ಲಿ ಗೃಹ ಲಕ್ಷ್ಮಿ ಹಣ
ಗೃಹ ಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆಯಾಗಲಿದೆ, ಆದರೆ, ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಅದಕ್ಕಾಗಿ ಕೋಟಿ ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಕೊಡ್ತೀವಿ ಅಂತ ಹೇಳಿದ್ದರಲ್ಲಾ ಮೋದಿಯವರೇ ಕೊಟ್ಟಿರೇನ್ರೀ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ, ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ, ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ರೂ. ಮಾತ್ರ, ಈಗ ದೇಶದ ಸಾಲ 185 ಲಕ್ಷ ಕೋಟಿ ರೂ.ಗೆ ಏರಿಸಿದ್ದೀರಿ, ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸದೆ ಸುಮ್ಮನಿದ್ದ ಬಿಜೆಪಿ ಪರಿವಾರದ ಕೊಡುಗೆ ಈ ದೇಶಕ್ಕೆ ಸೊನ್ನೆ.
ಬಿಜೆಪಿ ಕೊಡುಗೆ ಏನು
ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮ ಮೂಲಕ ದೇಶಕ್ಕೆ ಆಹಾರ ಭದ್ರತೆ ಒದಗಿಸಿ, ಬಡತನ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದರು, ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ದೇವರಾಜ ಅರಸು ಬಳಿಕ ಐದು ವರ್ಷ ಅವಧಿಗೆ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಿದವನು ನಾನು, ಮತ್ತೆ ಮುಖ್ಯಮಂತ್ರಿ ಆದೆ, ರಾಜ್ಯದ ಜನರಿಗೆ ನಾವು, ನಮ್ಮ ಸರ್ಕಾರ ಕೊಟ್ಟ ಹತ್ತು ಹಲವು ಭಾಗ್ಯಗಳು ಮತ್ತು ನುಡಿದಂತೆ ನಡೆದ ನಮ್ಮ ಜನಪರವಾದ ಬದ್ಧತೆ ಇದಕ್ಕೆ ಕಾರಣ.
ಬಿಜೆಪಿ 2018ರಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ.10 ರಷ್ಟನ್ನೂ ಈಡೇರಿಸಲಿಲ್ಲ, ಚುನಾವಣೆ ವೇಳೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು, ಗೆದ್ದ ಬಳಿಕ ಸಾಲ ಮನ್ನಾ ಮಾಡಿ ಅಂದ್ರೆ, ಸಾಲ ಮನ್ನಾ ಮಾಡೋಕೆ ದುಡ್ಡು ಪ್ರಿಂಟ್ ಹಾಕೋ ಮಿಷನ್ ಇದೆಯಾ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದರು.
ಶ್ರೀಮಂತರ ಸಾಲ ಮನ್ನ
ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ, ಅತ್ಯಂತ ಶ್ರೀಮಂತರ ಕಾರ್ಪೋರೇಟ್ ಕಂಪನಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು, ಇದೇ ಹಣದಲ್ಲಿ ರೈತರ ಸಾಲ ಮನ್ನಾ ಮಾಡಬಹುದಿತ್ತಲ್ಲ ಎಂದರು.
ಅಚ್ಛೇ ದಿನ್ ಆಯೆಗಾ ಅಂದ್ರಲ್ಲಾ ಮೋದಿ, ಬಂತಾ ಅಚ್ಛೇ ದಿನ್, ಯಾರ ಮನೆ ಬಾಗಿಲಿಗಾದರೂ ಅಚ್ಛೆ ದಿನ್ ಬಂದಿದೆಯಾ, ಯಾರಿಗಾದರೂ ಕಾಣಿಸಿದೆಯಾ ಎಂದು ವಾಗ್ದಾಳಿ ಮಾಡಿದರು.