ಬೆಂಗಳೂರು:ರಾಜ್ಯಾದ್ಯಂತ ವಕ್ಫ್ ಬೋರ್ಡ್ ಮೂಲಕ ಹೊಸ ಜಿಹಾದಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರ ನಡೆ-ನುಡಿ ಗಮನಿಸಿದರೆ, ದುರುಳತನ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಹುಂಬರು, ತಿಳಿವಳಿಕೆ ಇಲ್ಲದವರು ಎನ್ನುವುದಿಲ್ಲ, ಅವರೇನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಿದೆ ಎಂದರು.
ವಕ್ಫ್ ಆಸ್ತಿ ಲೂಟಿ
ವಕ್ಫ್ ಆಸ್ತಿಯನ್ನು ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರು ಲೂಟಿ ಮಾಡಿದ್ದರು, ಇದನ್ನು ಉಳಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು, ವಕ್ಫ್ ಜಾಗ ಬಾಡಿಗೆ, ಲೀಸ್ ಮೂಲಕ ಸಾವಿರಾರು ಕೋಟಿ ರೂ. ಪಡೆಯುತ್ತಿದ್ದರು, ಇದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆವು, ಈಗ ರೈತರ ವಿರುದ್ಧವೇ ವಕ್ಫ್ ಬೋರ್ಡ್ ಅನ್ನು ಛೂ ಬಿಟ್ಟಿದ್ದಾರೆ.
ನೂರಾರು ವರ್ಷಗಳ ಮಂದಿರ, ಮಠ ಕಬಳಿಸಲು ಮುಂದಾಗಿದ್ದಾರೆ, ವಿಜಯಪುರ ಜಿಲ್ಲೆ ಪಡಗಾನೂರು ಗ್ರಾಮದಲ್ಲಿ ಚಾಲುಕ್ಯರು ಕಟ್ಟಿದ 1,500 ವರ್ಷಗಳ ಪುರಾತನ ದೇವಾಲಯ ಆಸ್ತಿಯನ್ನೂ ವಕ್ಫ್ ಸಂಪತ್ತು ಎಂದು ಘೋಷಿಸಿದ್ದಾರೆ.
ಅಧಿಕಾರಿಯಿಂದ ಉತ್ತರ ಇಲ್ಲ
ಕಂದಾಯ ದಾಖಲೆಯ ಕಾಲಂ ನಂಬರ್ 11ರಲ್ಲಿ ದಾಖಲಾಗಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು, ಇದನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ.
ಆಸ್ತಿಯ ಸೇಲ್ ಡೀಡ್ ಇಲ್ಲದೆ ಸಂಪತ್ತು ಕಬಳಿಸುವ ಷಡ್ಯಂತ್ರ ವಕ್ಫ್ ನಡೆಸುತ್ತಿದೆ, ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದೆ, ಜಮ್ಮು-ಕಾಶ್ಮೀರದ ನ್ಯಾಷನಲ್ಸ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಭಯೋತ್ಪಾದಕರನ್ನು ಕೊಲ್ಲಬಾರದು, ಪಾಕಿಸ್ತಾನದ ಜೊತೆ ಭಾರತ ಮಾತುಕತೆ ನಡೆಸಬೇಕು ಎನ್ನುತ್ತಾರೆ, ಇಂತಹವರೊಂದಿಗೆ ಕಾಂಗ್ರೆಸ್‌ನ ’ಇಂಡಿ’ ಒಕ್ಕೂಟ ಇದೆ, ಕಾಂಗ್ರೆಸ್‌ಗೆ ಬುದ್ಧಿ ಭ್ರಮಣೆಯಾಗಿದೆಯೇ.
ಕಾಂಗ್ರೆಸ್‌ನ ತುಷ್ಟೀಕರಣ ಮಾಡುತ್ತಿದೆ, ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೆ ನಿಮ್ಮ ಮನೆಗಳನ್ನೂ ವಕ್ಫ್ ಆಸ್ತಿಯಾಗಿ ನಮೂದಿಸಬಹುದು, ಅಲ್ಪಸಂಖ್ಯಾತರ ಅರ್ಥಾತ್ ಮುಸಲ್ಮಾನರ ತುಷ್ಟೀಕರಣವೇ ಕಾಂಗ್ರೆಸ್ ಧ್ಯೇಯವನ್ನಾಗಿ ಮಾಡಿಕೊಂಡಿದೆ ಎಂದು ತೀಕ್ಷ್ಣವಾಗಿ ಟೀಕಿಸಿದರು.
ಕೇಸ್‌ಗಳನ್ನು ವಾಪಸ್ ಪಡೆದರು
ಸಿದ್ದರಾಮಯ್ಯ ಆಡಳಿತದ ಮೊದಲ ಅವಧಿಯಲ್ಲಿ (2013-18) ನಿರ್ಬಂಧಿತ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಪೂರ್ವಾವತಾರವಾದ ಸಿಮಿ ಸಂಘಟನೆಯ ಮೇಲಿದ್ದ 175 ಮೊಕದ್ದಮೆಗಳನ್ನು ವಾಪಸ್ ಪಡೆದರು, ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ಮೇಲೆ ಹಿಂದೂ ಸಂಘಟನೆಗಳು, ಮಂದಿರಗಳ ಮೇಲೆ ಅನೇಕ ಬಾರಿ ದಾಳಿ ಮಾಡಿದವರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದರು.
ಆದರೂ ಕಾಂಗ್ರೆಸ್ಸಿಗರಿಗೆ ಏನೂ ಅನಿಸುತ್ತಿಲ್ಲ, ತುಷ್ಟೀಕರಣ ರಾಜಕಾರಣದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ, ಇದು ಕಾಂಗ್ರೆಸ್‌ನ ತುಷ್ಟೀಕರಣದ ಪರಾಕಾಷ್ಠೆ, ಈ ಬಾರಿ ಕಾಂಗ್ರೆಸ್‌ಗೆ ಶಾಕ್ ನೀಡಿದರೆ, ಅನ್ಯಾಯಕ್ಕೊಳಗಾದ ಹಿಂದೂಗಳೂ ಜಾಗೃತರಾಗಿದ್ದಾರೆ ಎಂಬ ಸಂದೇಶ ಸಿಗಲಿದ್ದು, ಆ ಪಕ್ಷವನ್ನು ಮತದಾರರು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದರು.
ಬಿಜೆಪಿಯವರನ್ನು ಟೀಕಿಸುವುದಕ್ಕಾಗಿ, ತಮ್ಮನ್ನು ಕೇಸಿನಲ್ಲಿ ಸಿಲುಕಿಸುತ್ತಿದ್ದಾರೆ ಎಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ, ಜನರಿಗೆ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂಬುದು ಇದರಿಂದ ಅರ್ಥವಾಗುತ್ತದೆ.
ಸಿದ್ದರಾಮಯ್ಯ ವಿರುದ್ಧ ತೀರ್ಪು
ರಾಜ್ಯಪಾಲರು ಸಂಪೂರ್ಣ ವಿವೇಚನೆ ಬಳಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದನ್ನು ಪ್ರಶ್ನಿಸಿ, ಕೋರ್ಟ್ ಮಟ್ಟಿಲೇರಿದ ಮಿಸ್ಟರ್ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯವೇ ತೀರ್ಪು ನೀಡಿದೆ, ನ್ಯಾಯಾಲಯ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಆ ಪಕ್ಷಕ್ಕೆ ಗೌರವವಿಲ್ಲ.
ಸಂವಿಧಾನ ಪುಸ್ತಕ ಎಂಬುದಾಗಿ ತೋರಿಸಿ, ಖಾಲಿ ಹಾಳೆಯ ಪುಸ್ತಕದ ಪ್ರತಿಗಳನ್ನು ಕಾಂಗ್ರೆಸ್ಸಿಗರು ಹಂಚಿದ್ದಾರೆ ಎಂದರು.