ಸಂಡೂರು:ಸಿಬಿಐ, ಇ.ಡಿ., ಐಟಿ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಕೇಂದ್ರದ ಎನ್‌ಡಿಎ ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಆರೋಪಿಸಿದ್ದಾರೆ.
ನಾನು, ಅಧಿಕಾರಲ್ಲಿದ್ದರೆ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂಬ ಒಂದೇ ಉದ್ದೇಶಕ್ಕೆ ನನ್ನ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ.
ಬಡವರ ಪರ ಗ್ಯಾರಂಟಿ ಯೋಜನೆ
ಬಡವರ ಪರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ, ಆದ್ದರಿಂದ ನನ್ನ ಮೇಲೆ ಸುಳ್ಳು ಮೊಕದ್ದಮೆ ಹಾಕಿಸಿದ್ದಾರೆ, ನಾನು ಹಳ್ಳಿಯಿಂದ ಬಂದವನು ಇಂತಹದ್ದಕ್ಕೆಲ್ಲಾ ಹೆದರುವ ಮಗ ನಾನಲ್ಲ.
ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿ, ಕೇಂದ್ರ ತಮ್ಮ ವಿರುದ್ಧ ಷಡ್ಯಂತ್ರಗಳನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳಿನಕಂತೆ ಎಂದು ಬಣ್ಣಿಸಿದ ಅವರು, ನನ್ನ ಬಳಿ ಸರ್ಕಾರಿ ನೌಕರರಿಗೆ ವೇತನ ನೀಡಲೂ ಹಣವಿಲ್ಲ ಎಂಬ ಹಸಿಸುಳ್ಳು ಹೇಳುತ್ತಾರೆ.
56,000 ಕೋಟಿ ರೂ.
ಐದು ಗ್ಯಾರಂಟಿಗಳಿಗೆ 56,000 ಕೋಟಿ ರೂ. ನೀಡಿರುವುದಲ್ಲದೆ, ಅಭಿವೃದ್ಧಿಗಾಗಿ 1.20 ಲಕ್ಷ ಕೋಟಿ ರೂ. ನೀಡಿದ್ದೇನೆ, ಇದೆಲ್ಲಾ ಎಲ್ಲಿಂದ ಬಂತು ಮಿಸ್ಟರ್ ಮೋದಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
15ನೇ ಹಣಕಾಸು ಆಯೋಗದ ಶಿಫಾರಸಿನಂತೆ 11,495 ಕೋಟಿ ರೂ. ಕೇಂದ್ರದಿಂದ ನಮಗೆ ಕೊಡಬೇಕಿತ್ತು, ಇದು ನಮ್ಮದೇ ಪಾಲಿನ ಹಣ, ಇದನ್ನು ರಾಜ್ಯಕ್ಕೆ ಕೊಡದೆ ನಮಗೆ ವಂಚಿಸಿದ್ದಾರೆ, ಇದೂ ಸೇರಿ ಒಟ್ಟು 17,000 ಕೋಟಿ ರೂ. ವಂಚನೆಯಾಗಿದೆ.
ನಮ್ಮ ಪಾಲಿನ 17,000 ಕೋಟಿ ರೂ. ಬಂದಿದ್ದರೆ, ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಿ ಬಿಡುತ್ತಾರೆ ಎನ್ನುವ ಕಾರಣಕ್ಕೆ ನಮಗೆ ವಂಚಿಸಿ ರಾಜ್ಯದ ಅಭಿವೃದ್ಧಿಗೆ ಮೋದಿ ಕಂಟಕರಾಗಿದ್ದಾರೆ.
371ಜೆ ಜಾರಿಗೆ ಬಿಜೆಪಿ ವಿರೋಧಿಸಿತ್ತು
ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿಗೆ ಬಿಜೆಪಿ ವಿರೋಧಿಸಿತ್ತು, ಯಾವುದೇ ಕಾರಣಕ್ಕೂ ಕೊಡಬಾರದು ಎಂದಿತ್ತು.
ಆಗ ಕೇಂದ್ರದಲ್ಲಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ 371ಜೆ ಜಾರಿ ಮಾಡಿತು, ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಕಾರದಿಂದ 371ಜೆ ಜಾರಿಯಾಯಿತು.
ಜಾರಿಯಾಗುತ್ತಿದ್ದಂತೆ ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ರೂ. ವಿಶೇಷ ಅನುದಾನ ನಾನು ನೀಡಿದೆ, ಬಿಜೆಪಿ ಏನು ಕೊಟ್ಟಿದೆ ಎಂದು ಪ್ರಶ್ನಿಸಿದರು.