ಬೆಂಗಳೂರು:ಕೋವಿಡ್-19 ಸಂದರ್ಭದಲ್ಲಿ ಚಿಕಿತ್ಸೆ ಹಾಗೂ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿರುದ್ಧ ತನಿಖೆಗೆ ನ್ಯಾಯಮೂರ್ತಿ ಜಾನ್‌ಮೈಕಲ್ ಡಿ.ಕುನ್ಹಾ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಆಯೋಗವು ನೀಡಿರುವ ವರದಿಯನ್ನು ಕಾಂಗ್ರೆಸ್ ಬಹಿರಂಗಪಡಿಸಿದೆ.
ಆಯೋಗವು ಕಳೆದ ಆಗಸ್ಟ್ 31ರಂದು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿ, ಈ ಹಗರಣದಲ್ಲಿ ಆರೋಗ್ಯ, ನಗರಾಭಿವೃದ್ಧಿ, ಪೌರಾಡಳಿತ, ವೈದ್ಯಕೀಯ ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಕ್ರಿಮಿನಲ್ ಪ್ರಕರಣ
ಇವರಿಂದ 700 ಕೋಟಿ ರೂ. ವಸೂಲಿ ಮಾಡಬೇಕು ಹಾಗೂ ತಪ್ಪಿತಸ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪ್ರತ್ಯೇಕ ಸಂಸ್ಥೆಯಿಂದ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು.
ಇದು ಮಧ್ಯಂತರ ವರದಿ, ನಮಗೆ ಪೂರ್ಣ ವರದಿ ನೀಡಲು ಸಮಯಾವಕಾಶ ಬೇಕಿದೆ, ಎಲ್ಲಾ ಜಿಲ್ಲೆಗಳಿಂದ ಪೂರ್ಣ ಮಾಹಿತಿ ದೊರೆತಿಲ್ಲ.
ಆದರೆ, ಪ್ರಥಮ ಹಂತದಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಹಣ ವಸೂಲಿ ಮಾಡಿ ಎಂದಿದೆ.
ಸಂಪುಟ ಉಪಸಮಿತಿ ರಚನೆ
ಆಯೋಗದ ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸ್ವೀಕೃತಿ ಮಾಡಿದ್ದಲ್ಲದೆ, ಶಿಫಾರಸುಗಳ ಅನುಷ್ಟಾನ ಮತ್ತು ಕ್ರಮಕೈಗೊಳ್ಳುವ ಸಂಬಂಧ ಸಂಪುಟ ಉಪಸಮಿತಿ ರಚನೆ ತೀರ್ಮಾನ ಮಾಡಿತ್ತು.
ಕಿಟ್‌ಗಳ ಖರೀದಿ ವೇಳೆ 7223.64 ಕೋಟಿ ರೂ. ಮೊತ್ತದ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಅದರಲ್ಲಿ 500 ಕೋಟಿ ರೂ.ಗಳನ್ನು ತಕ್ಷಣವೇ ವಸೂಲಿ ಮಾಡುವಂತೆ ಹೇಳಿತ್ತು.
ಇದೀಗ ಕಾಂಗ್ರೆಸ್ ಕುನ್ಹಾ ಅವರ ವರದಿಯ ಕೆಲವು ಭಾಗಗಳನ್ನು ದಾಖಲೆ ಸಹಿತ ಬಹಿರಂಗಪಡಿಸಿದೆ, ಈ ಎಲ್ಲಾ ಹಗರಣದ ಹಿಂದೆ ಯಡಿಯೂರಪ್ಪ ಮತ್ತು ಶ್ರೀರಾಮುಲು ಇದ್ದು, ತನಿಖೆ ನಡೆಸುವಂತೆ ಮಾಡಿರುವ ಶಿಫಾರಸನ್ನು ಬಹಿರಂಗಪಡಿಸಿದ್ದಾರೆ.
3 ಲಕ್ಷ ಪಿಪಿಇ ಕಿಟ್
ಏಪ್ರಿಲ್ 2020ರಲ್ಲಿ ಚೀನಾದ ಎರಡು ಕಂಪನಿಗಳಿಂದ 3 ಲಕ್ಷ ಯೂನಿಟ್ ಪಿಪಿಇ ಕಿಟ್‌ಗಳನ್ನು ಅತ್ಯಂತ ದುಬಾರಿ ದರಕ್ಕೆ ಖರೀದಿಸಿರುವುದಕ್ಕೆ ಯಾವುದೇ ನಿಖರವಾರ ಕಾರಣವಿಲ್ಲ.
ಚೀನಾದ ಡಿಹೆಚ್‌ಬಿ ಗ್ಲೋಬಲ್ ಹಾಂಕಾಂಗ್ ಮತ್ತು ಬಿಗ್ ಫಾರ್ಮಾಸ್ಯೂಟಿಕಲ್ಸ್‌ನಿಂದ ಪ್ರತಿ ಯೂನಿಟ್‌ಗೆ ಎರಡು ಸಾವಿರ ರೂ.ನಂತೆ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ.
ಪಾರದರ್ಶಕತೆ ಕಾಯ್ದೆ ವಿನಾಯಿತಿ ಪಡೆಯದೆ ನೇರವಾಗಿ ಖರೀದಿ ಮಾಡಲಾಗಿದೆ, ಸಂಗ್ರಹಣಾ ನಿಯಮದ ಮೂಲ ಕಾರ್ಯವಿಧಾನವನ್ನು ಅನುಸರಿಸದೆ, ನೇರವಾಗಿ ಅಂದಿನ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಆದೇಶದಂತೆ ಖರೀದಿ ಮಾಡಲಾಗಿದೆ.
ಇಡೀ ಪ್ರಕ್ರಿಯೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆಪ್ತರಾದ ಪೂರೈಕೆದಾರರಿಗೆ ಅನುಕೂಲ ಮತ್ತು ಲಾಭ ಮಾಡಿಕೊಡುವ ರೀತಿಯಲ್ಲಿ ನಡೆದಿದೆ ಎಂದು ಆಯೋಗದ ವರದಿ ತಿಳಿಸಿದೆ.