ನವೆಂಬರ್ 23ರಂದು ಮತ ಎಣಿಕೆ, ಫಲಿತಾಂಶ
ಬೆಂಗಳೂರು:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಬಿರುಸಿನ ಶಾಂತಿಯುತ ಮತದಾನವಾಗಿದೆ.
ಚನ್ನಪಟ್ಟಣ ( ಶೇ. 88.80) ಶಿಗ್ಗಾಂವಿ (ಶೇ.80.48 ) ಹಾಗೂ ಸಂಡೂರು (ಶೇ.76.24 ) ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡ .., ಮತದಾನವಾಗಿದೆ.
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಎರಡು ಕ್ಷೇತ್ರಗಳಲ್ಲಿ, ಜೆಡಿಎಸ್ ಒಂದರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
45 ಅಭ್ಯರ್ಥಿಗಳು ಕಣದಲ್ಲಿ
ಒಟ್ಟಾರೆ ಮೂರೂ ಕ್ಷೇತ್ರಗಳಿಂದ 45 ಅಭ್ಯರ್ಥಿಗಳು ಕಣದಲ್ಲಿದ್ದು, ಫಲಿತಾಂಶಕ್ಕಾಗಿ 10 ದಿನ ಕಾಯಬೇಕಾಗಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ನವೆಂಬರ್ 20ಕ್ಕೆ ಮತದಾನ ಪೂರ್ಣಗೊಳ್ಳಲಿದ್ದು, 23ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಮತ ಎಣಿಕೆಯೂ ನಿಗದಿಯಾಗಿದೆ.
ಕೇಂದ್ರ ಚುನಾವಣಾ ಆಯೋಗ ಅತ್ಯಂತ ಬಿಗಿ ಬಂದೋಬಸ್ತ್‌ನಲ್ಲಿ ಚುನಾವಣೆ ನಡೆಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ, ಅದರಲ್ಲೂ ಚನ್ನಪಟ್ಟಣ ತುಂಬಾ ಸೂಕ್ಷ್ಮ ಕ್ಷೇತ್ರವಾಗಿದ್ದರಿಂದ ರಾಜ್ಯ ಪೋಲಿಸ್ ಸಿಬ್ಬಂದಿ ಜೊತೆ ಕೇಂದ್ರ ಮೀಸಲು ಪಡೆಯನ್ನೂ ನಿಯೋಜಿಸಲಾಗಿತ್ತು.
ಬೆಳಗ್ಗೆಯಿಂದಲೇ ಸಾಲು
ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಸಾಲು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಮೂರೂ ಕ್ಷೇತ್ರಗಳಲ್ಲೂ ರಾಜಕೀಯ ಮುಖಂಡರುಗಳ ಕುಟುಂಬ ವರ್ಗದವರೇ ಕಣದಲ್ಲಿ ಇದ್ದಿದ್ದರಿಂದ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿತ್ತು.
ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರೆ, ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಕಣದಲ್ಲಿದ್ದರು.
ಮತಗಟ್ಟೆಗಳಿಗೆ ವಿಶೇಷಚೇತನರು
93 ವರ್ಷದ ವಯೋವೃದ್ಧರೂ ಸೇರಿದಂತೆ ಅನೇಕ ವಿಶೇಷಚೇತನರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಮೂರೂ ಕ್ಷೇತ್ರಗಳಲ್ಲಿ ಉತ್ಸಾಹದ ಮತದಾನ ಕಂಡುಬಂದಿತು.
ಶಿಗ್ಗಾವಿ ಕ್ಷೇತ್ರದ ಸವಣೂರಿನ ದಂಡಿನಪೇಟೆಯಲ್ಲಿ ಮತದಾನ ಬಹಿಷ್ಕಾರದ ಒಂದೆರಡು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ, ಕ್ಷೇತ್ರದ ಮತದಾನ ಬಹುತೇಕ ಶಾಂತಿಯುತವಾಗಿತ್ತು, ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ರಾಜ್ಯದ ಮಿನಿ ಮಹಾಸಮರ
ರಾಜ್ಯದ ಮಿನಿ ಮಹಾಸಮರ ಎಂದೇ ಪರಿಗಣಿಸಲಾಗಿರುವ ಈ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಕಣಗಳಾಗಿವೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ 5 ಸಖಿ ಮತಗಟ್ಟೆ, ಒಂದು ಯುವ ಮತಗಟ್ಟೆ, 1 ದಿವ್ಯಾಂಗರು ನಿರ್ವಹಿಸುವ ಮತದಾನ ಕೇಂದ್ರ, ಒಂದು ವಿಷಯಾಧರಿತ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು.
ನವೆಂಬರ್ 23ರಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಶಿಗ್ಗಾವಿ ಕ್ಷೇತ್ರದ ಮತ ಎಣಿಕೆ ಹಾವೇರಿ ಜಿಲ್ಲೆ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಸಂಡೂರು ಕ್ಷೇತ್ರದ ಮತ ಎಣಿಕೆ ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.