ಭಿನ್ನಮತಿಯರ ವಿರುದ್ಧ ಕ್ರಮಕ್ಕೆ ಪಕ್ಷ ನಿಷ್ಠ ಆಗ್ರಹ
ಬೆಂಗಳೂರು : ರಾಜ್ಯ ಬಿಜೆಪಿ ನಾಯಕರ ನಡುವಿನ ಒಳಜಗಳ ಬೀದಿಗೆ ಬಂದಿವೆ. ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಸಮರ ಸಾರಿರುವ ಭಿನ್ನಮತಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ನಿಷ್ಠಾವಂತ ನಾಯಕರು ಆಗ್ರಹಿಸಿದ್ದಾರೆ.
ವಕ್ಫ್ ವಿವಾದ ಕುರಿತ ಹೋರಾಟ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿಲುವಿನ ಪರ ಮತ್ತು ವಿರೋಧ ಬಣ ನಡುವಿನ ರಾಜಕೀಯ ಜೋರಾಗಿದೆ. ರಾಜ್ಯಾದ್ಯಂತ ನಾಳೆಯಿಂದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬೀದಿಗಿಳಿದರೆ, ವಿಜಯೇಂದ್ರ ಬಣದ ವಿರುದ್ಧ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಂಪು ಪ್ರತ್ಯೇಕವಾಗಿ ಹೋರಾಟಕ್ಕೆ ಮುಂದಾಗಿದೆ.
ಯತ್ನಾಳ್ ಹೋರಾಟ ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣಕ್ಕೆ ಸೇರಿದ ಹಿರಿಯ ನಾಯಕರು, ರಾಜ್ಯಾಧ್ಯಕ್ಷರು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಹೋಗುವುದು ಸರಿಯಲ್ಲ ಎಂದಿದ್ದಾರೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಯಡಿಯೂರಪ್ಪ ಬಣದ 20ಕ್ಕೂ ಹೆಚ್ಚು ಹಿರಿಯ ಮುಖಂಡರ ಸಭೆಯಲ್ಲಿ, ರಾಜ್ಯಾಧ್ಯಕ್ಷರು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧವಾಗಿ ನಡೆದುಕೊಂಡರೆ, ವರಿಷ್ಠರ ನಿಲುವಿಗೆ ವಿರುದ್ಧವಾಗಿ ಹೋದಂತಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಪಕ್ಷ ಸರಿಯಾದ ಸಮಯದಲ್ಲಿ ಹೋರಾಟಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲೇ ಒಡಕು ಮೂಡುವುದು ಸರಿಯಲ್. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಕರ್ನಾಟಕದಲ್ಲಿ ಪಕ್ಷ ಬಲವಾಗಿ ಬೆಳದಿದೆ. ನಾವು ಇಲ್ಲಿ ಯಾವುದೇ ವ್ಯಕ್ತಿ ಪೂಜೆ ಮಾಡುತ್ತಿಲ್ಲ. ಪಕ್ಷದ ನಿರ್ಧಾರದಂತೆ ಕೆಲಸ ಮಾಡಬೇಕೇ ಹೊರತು, ಅದಕ್ಕೆ ವಿರುದ್ಧ ಧ್ವನಿ ಎತ್ತುವುದು ಸರಿಯಲ್ಲ.
ನಾವು ಯಾರ ಪರವೂ ಇಲ್ಲ, ಪಕ್ಷದ ತೀರ್ಮಾನಕ್ಕೆ ತಲೆಬಾಗುತ್ತೇವೆ. ಇದನ್ನು ಎಲ್ಲರೂ ರೂಢಿಸಿಕೊಳ್ಳಬೇಕು, ನಾವು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ, ಜನರಗೆ ನ್ಯಾಯ ದೊರೆಕಿಸಲು ಸಾಧ್ಯವಾಗುತ್ತದೆ. ವ್ಯಕ್ತಿ ಪ್ರತಿಷ್ಠೆ ಬಿಡೋಣ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸೋಣ, ಅಧ್ಯಕ್ಷರ ಎಲ್ಲ ತೀರ್ಮಾನಗಳ ವಿರುದ್ಧ ಭಿನ್ನ ಹೇಳಿಕೆ ನೀಡುವವರ ವಿರುದ್ಧ ಪಕ್ಷದ ದೆಹಲಿ ವರಿಷ್ಠರನ್ನು ಭೇಟಿ ಮಾಡಿ ದೂರು ನೀಡಲು ಸಭೆ ನಿರ್ಧರಿಸಿದೆ.
ವಕ್ಫ್ ಒತ್ತುವರಿ ತೆರವು ವಿರೋಧಿ ಹೋರಾಟದ ಹೆಸರಿನಲ್ಲಿ ಪಕ್ಷದ ಕೆಲವು ನಾಯಕರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದು, ಇದು ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ತಕ್ಷಣವೇ ಮಧ್ಯೆ ಪ್ರವೇಶಿಸಿ ಎಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಭೆ ಆಗ್ರಹಿಸಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರನ್ನು ಹೈಕಮಾಂಡ್ ನೇಮಕ ಮಾಡಿದ್ದು, ಈ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. ಆದರೆ, ಕೆಲವರು ಈ ನಾಯಕತ್ವ ಒಪ್ಪುವುದಿಲ್ಲ ಎಂದು ಹೈಕಮಾಂಡ್‌ಗೇ ಸೆಡ್ಡು ಹೊಡೆಯಲು ಮುಂದಾಗಿದ್ದು, ಇಂಥವರನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಸಭೆ ತೀರ್ಮಾನಿಸಿದೆ.
ಬಿಪಿಎಲ್ ಕಾರ್ಡು ರದ್ದು, ವಕ್ಫ್ ಆಸ್ತಿ ತೆರವು, ಮುಡಾ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಹಲವು ಅಕ್ರಮಗಳ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಯಶಸ್ವಿ ಹೋರಾಟ ನಡೆಸಲಾಗುತ್ತಿದೆ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಜನಬೆಂಬಲವೂ ದೊರೆಯುತ್ತಿದೆ, ಇದನ್ನು ಸಹಿಸಲಾರದ ಕೆಲವರು ಆಡಳಿತ ಪಕ್ಷದ ಜೊತೆ ಸೇರಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಭೆಯಲ್ಲಿದ್ದ ಹಲವು ನಾಯಕರು ಆರೋಪಸಿದರು.
ಕೆಲವೇ ಕೆಲವು ಮಂದಿ ನಡೆಸುತ್ತಿರುವ ಚಟುವಟಿಕೆಗಳಿಂದ ಪಕ್ಷದಲ್ಲಿ ದೊಡ್ಡ ಗೊಂದಲ ಸೃಷ್ಟಿಯಾಗುವುದನ್ನು ತಪ್ಪಿಸಿ ಭಿನ್ನಮತೀಯರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಅಗತ್ಯವಿದೆ. ಬಿಪಿಎಲ್ ಪಡಿತರ ಚೀಟಿ ರದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿಗದಿಪಡಿಸಿದ್ದ ಅನುದಾನ ವರ್ಗಾವಣೆ ಮತ್ತು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಆಗ್ರಹಿಸಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ರಾಜ್ಯದಲ್ಲಿ ನಡೆದ ವಿಧಾನಸಭೆ ಉಪಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ನಂತರ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ನಿಯೋಗ ದೆಹಲಿಗೆ ತೆರಳಿ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ. ವಿಧಾನಮಂಡಲದ ಅಧಿವೇಶನಕ್ಕೂ ಮುನ್ನ ಬಿಜೆಪಿ ದೆಹಲಿ ವರಿಷ್ಠರು ರಾಜ್ಯ ಬಿಜೆಪಿಯಲ್ಲಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು. ಹಿಂದುಳಿದ ಮತ್ತು ದಲಿತ ಸಮುದಾಯಗಳ ಬೃಹತ್ ಸಮಾವೇಶ ನಡೆಸಲು ಅನುಮತಿ ನೀಡುವಂತೆ ಕೋರಲು ಸಭೆ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.