ಉಡುಪಿ:ಯಾವುದೇ ಕಾರಣಕ್ಕೂ ಬಿಪಿಎಲ್ ಅರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಅರ್ಹರ ಕಾರ್ಡ್‌ಗಳು ರದ್ದಾಗಿದ್ದರೆ ಈ ಬಗ್ಗೆ ಪಟ್ಟಿ ಕೊಡಲು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಂಚಿತರಿಗೆ ಮರು ಅರ್ಜಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂಬ ಸೂಚನೆ ನೀಡಿದ್ದೇವೆ, ರಾಜ್ಯ, ತಾಲ್ಲೂಕು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಈ ಬಗ್ಗೆ ಪರಿಶೀಲಿಸಲಿವೆ, ಒಬ್ಬ ಬಡವನಿಗೂ ತೊಂದರೆ ಆಗಲು ಬಿಡುವುದಿಲ್ಲ.
ನಾನು ಭರವಸೆ ನೀಡುತ್ತೇನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಪ್ರತಿನಿಧಿಯಾಗಿ, ಪಕ್ಷದ ಅಧ್ಯಕ್ಷನಾಗಿ ನಾನು ಭರವಸೆ ನೀಡುತ್ತೇನೆ, ಯಾರೂ ಭಯ ಪಡುವ ಅಗತ್ಯವಿಲ್ಲ, ವಿರೋಧ ಪಕ್ಷಗಳು ಸುಮ್ಮನೆ ಮಾತನಾಡುತ್ತಿವೆ ಎಂದರು.
ರಾಜ್ಯದಲ್ಲಿ ನಕ್ಸಲ್ ಎನ್‌ಕೌಂಟರ್, ನಕ್ಸಲರ ಶರಣಾಗತಿ ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರಿಗೆ ಸಂಬಂಧಪಟ್ಟ ವಿಚಾರ.
ನಬಾರ್ಡ್ ಸಾಲ ಕಡಿತ ವಿಚಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮೂರೂವರೆ ವರ್ಷ ಗ್ಯಾರಂಟಿ
ಮುಂದಿನ ಮೂರೂವರೆ ವರ್ಷ ಗ್ಯಾರಂಟಿಗಳು ಇರುತ್ತವೆ, ನಂತರವೂ ನಾವೇ ಅಧಿಕಾರಕ್ಕೆ ಬಂದು ಮತ್ತೆ ಐದು ವರ್ಷ ಮುಂದುವರೆಸುತ್ತೇವೆ ಎಂದರು.
ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪ್ರಯತ್ನ ಮಾಡಿದ್ದೇವೆ, ಫಲಾಫಲ ಭಗವಂತನದ್ದು, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ.
ಎಲ್ಲಾ ಕಡೆಯೂ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎನ್ನುವ ಭರವಸೆ ಇಟ್ಟಿದ್ದೇವೆ, ರಾಜ್ಯದಲ್ಲಿ ಮೂರೂ ರಾಜಕೀಯ ಪಕ್ಷಗಳು ತಲಾ ಒಂದೊಂದು ಸ್ಥಾನ ಗೆಲ್ಲುತ್ತವೆಂಬ ಸಮೀಕ್ಷೆಗಳ ಮೇಲೆ ನಂಬಿಕೆಯಿಲ್ಲ, ಸಮೀಕ್ಷೆ ಇಟ್ಟುಕೊಂಡು ರಾಜಕೀಯ ಮಾಡಲು ಆಗುವುದಿಲ್ಲ, ಜನ ಗೌಪ್ಯ ಮತದಾನದ ಮೂಲಕ ಬೆಂಬಲ ನೀಡುತ್ತಾರೆ, ಯಾರು ಜನರ ಹೃದಯ ಹಾಗೂ ವಿಶ್ವಾಸ ಪಡೆಯುತ್ತಾರೋ ಅವರಿಗೆ ಜಯ ಎಂದರು.