ಬೆಂಗಳೂರು:ಆರೋಗ್ಯ ಕ್ಷೇತ್ರದಲ್ಲಿ ಬಡಜನರಿಗೆ, ಆರ್ಥಿಕ ದುರ್ಬಲರಿಗೆ ಆದಿಚುಂಚನಗಿರಿ ಕ್ಷೇತ್ರ ಬಹುದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಲ್ಲದೆ, ಶ್ರೀಕ್ಷೇತ್ರವು ಸಂಶೋಧನೆ ಮತ್ತು ಅಭಿವೃದ್ಧಿ ವಿಷಯದಲ್ಲಿಯೂ ಮಾದರಿಯಾಗಿ ಕೆಲಸ ಮಾಡುತ್ತಿದೆ, ಜಾತಿ ಧರ್ಮ ಮೀರಿ ಅನ್ನ, ಅಕ್ಷರ, ಆಶ್ರಯದ ತ್ರಿವಿಧ ದಾಸೋಹದಲ್ಲಿ ಅವಿರತ ನಿರತವಾಗಿ ಲಕ್ಷೋಪಲಕ್ಷ ಮಕ್ಕಳಿಗೆ ಆಸರೆಯಾಗಿದೆ ಎಂದರು.
ನಿಸ್ವಾರ್ಥ ಸೇವೆ ಅನುಕರಣೀಯ
ಬಿಜಿಎಸ್ ಸಿಟಿಯಲ್ಲಿ ನಡೆದ 16ನೇ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿವಿಧ ದಾಸೋಹದ ಜತೆಗೆ ಬಡಜನರಿಗೆ, ಅದರಲ್ಲೂ ಆರ್ಥಿಕ ದುರ್ಬಲರಿಗೆ ಆರೋಗ್ಯ ಸೌಲಭ್ಯ ನೀಡುತ್ತಿದೆ, ಇಂತಹ ನಿಸ್ವಾರ್ಥ ಸೇವೆ ಅನುಕರಣೀಯ ಎಂದರು.
ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ವಿದ್ಯಾರ್ಥಿಗಳು ಕಲಿಕಾರ್ಥಿಗಳಾಗಿ ಇಲ್ಲಿಗೆ ಬರುತ್ತಾರೆ, ಆದಿಚುಂಚನಗಿರಿಯ ಹಿಂದಿನ ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಾಕಿರುವ ಗಟ್ಟಿ ಅಡಿಪಾಯದ ಮೇಲೆ ಇಂದಿನ ನಿರ್ಮಲಾನಂದನಾಥ ಸ್ವಾಮೀಜಿ ಕ್ಷೇತ್ರದ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ, ಜಾಗತಿಕ ಮಟ್ಟದಲ್ಲಿಯೂ ಶ್ರೀಮಠದ ಸಂಸ್ಥೆಗಳು ಪ್ರಖ್ಯಾತಿ ಹೊಂದಿವೆ ಎಂದರು.
ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು, ಕಾರ್ಯಕ್ರಮದಲ್ಲಿ ಪ್ರಕಾಶನಾಥ ಸ್ವಾಮೀಜಿ, ಶಿಲ್ಪಿ ಅರುಣ್ ಯೋಗಿರಾಜ್, ಚಿತ್ರನಟಿ ಪ್ರಿಯಾಂಕಾ ಉಪೇಂದ್ರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.