ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 14 ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನವೆಂಬರ್ 26ರಂದು ’ಸದ್ಯದ ಸ್ಥಿತಿ’ (ಸ್ಟೇಟಸ್ ರಿಪೋರ್ಟ್) ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಿದೆ.
ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ತನಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ಮುಂದುವರೆದ ವಿಚಾರಣೆ ಮಂಗಳವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಬರಲಿದೆ.
ಹಿಂದಿನ ವಿಚಾರಣೆ ವೇಳೆ ಸೂಚನೆ
ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಕ್ಕೂ ಮುನ್ನ ತಮಗೆ, ಲೋಕಾಯುಕ್ತ ಬಿಡಿ ನಿವೇಶನಗಳ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಈ ಹಿಂದಿನ ವಿಚಾರಣೆ ವೇಳೆ ಸೂಚಿಸಿದ್ದರು.
ನ್ಯಾಯಾಲಯದ ಆದೇಶದಂತೆ, ಲೋಕಾಯುಕ್ತ ಇದುವರೆಗೆ ನಡೆಸಿರುವ ತನಿಖಾ ವರದಿ ಜೊತೆ ಪೂರಕ ದಾಖಲೆಗಳನ್ನು ಸಲ್ಲಿಸಲಿದೆ.
ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದಾರೆ, ಆದರೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲವಾದರೂ ಸದ್ಯದ ಸ್ಥಿತಿಯನ್ನು ಸಲ್ಲಿಸಲಿದ್ದಾರೆ.
ವಿಚಾರಣೆ ಬಗ್ಗೆ ಮಾಹಿತಿ
14 ಬಿಡಿ ನಿವೇಶನಗಳ ಹಂಚಿಕೆ ವಿವಾದದ ಮೊದಲ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, 2ನೇ ಆರೋಪಿ ಅವರ ಪತ್ನಿ ಪಾರ್ವತಿ ಹಾಗೂ ಭೂಮಾಲಿಕತ್ವ ಹೊಂದಿದವರು, ಮುಡಾದಲ್ಲಿ ಕಾರ್ಯನಿರ್ವಹಿಸಿದ ಮಾಜಿ ಮತ್ತು ಹಾಲಿ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿರುವ ಬಗ್ಗೆ ಮಾಹಿತಿ ಸಲ್ಲಿಸಲಿದ್ದಾರೆ.
ನಿವೇಶನ ಹಂಚಿಕೆ ಮಾಡಿದ ಹಿಂದಿನ ಮುಡಾ ಆಯುಕ್ತ ನಟೇಶ್ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ, ಅವರು ನೀಡಿದ ಮಾಹಿತಿ ಮೇಲೆ ತನಿಖೆ ಮುಂದುವರೆದಿದೆ.
ಅಧಿಕಾರಿಯ ವಿಚಾರಣೆಗೆ ಸರ್ಕಾರ ಮೂರು ವಾರ ತಡವಾಗಿ ಅನುಮತಿ ನೀಡಿದ್ದರಿಂದ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಸದ್ಯದಸ್ಥಿತಿ ವರದಿ ನೀಡಲಿದೆ.
ಲೋಕಾಯುಕ್ತ ಐಜಿ
ಎಸ್‌ಪಿ ಅವರು, ಲೋಕಾಯುಕ್ತ ಐಜಿ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಕೆಲವು ದಿನಗಳ ಹಿಂದೆ ಭೇಟಿ ಮಾಡಿ ಸದ್ಯದ ಸ್ಥಿತಿಯ ಮಾಹಿತಿ ವರದಿ ನೀಡಿದ್ದರು.
ಈ ವರದಿ ನಂತರ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ಪ್ರಮುಖ ಪಾತ್ರಧಾರರಾಗಿದ್ದ ಮುಡಾದ ಆಯುಕ್ತರನ್ನು ವಿಚಾರಣೆಗೆ ಒಳಪಡಿಸಿದ್ದರು, ಈ ವರದಿಯು ಸೇರಿದಂತೆ ಎಲ್ಲವನ್ನೂ ನ್ಯಾಯಪೀಠದ ಮುಂದೆ ಸಲ್ಲಿಸಲಿದ್ದಾರೆ.
ಎಸ್‌ಪಿ ಅವರು ಐಜಿ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರ ಪಾತ್ರವಿಲ್ಲ ಅಧಿಕಾರಿಗಳ ಲೋಪದಿಂದ ನಿವೇಶನಗಳ ಹಂಚಿಕೆ ನಡೆದಿದೆ ಎಂದು ತಿಳಿಸಿದ್ದರು.
ಪ್ರಕರಣ ಸಿಬಿಐಗೆ ವಹಿಸುವ ಸಂಬಂಧದ ಅರ್ಜಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು, ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು.