ಬೆಂಗಳೂರು:ಜಾತಿ ವ್ಯವಸ್ಥೆಯಿಂದ ಅಸಮಾನತೆ, ಮನುಷ್ಯರ ನಡುವೆ ತಾರತಮ್ಯ ಸೃಷ್ಟಿಯಾಗಿದೆ, ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಕುರಿತು ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ಸಂವಿಧಾನ ಅಂಗೀಕರಣದ 75ನೇ ವರ್ಷದ ದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದೇ ಸಂವಿಧಾನ ಬಲದಿಂದ, ವಿಶ್ವದ ದೀರ್ಘಕಾಲದ ಸಂವಿಧಾನ ನಮ್ಮದಾಗಿದೆ, ಸಂವಿಧಾನ ಜಾರಿ ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಎಚ್ಚರಿಕೆಯನ್ನು ನಾವ್ಯಾರೂ ಮರೆಯಬಾರದು ಎಂದರು.
ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ, ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ, ಸಂವಿಧಾನ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂಬುದು ಡಾ.ಬಾಬಾ ಸಾಹೇಬರ ನಂಬಿಕೆಯಾಗಿತ್ತು, ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು.
ಸಾಮಾಜಿಕ ನ್ಯಾಯ
ಆರ್ಥಿಕ, ಸಾಮಾಜಿಕ ಅಸಮಾನತೆ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಳ್ಳಬೇಕಿದೆ, ಸಂವಿಧಾನ ಅರ್ಥ ಮಾಡಿಕೊಳ್ಳುವುದು, ಪಾಲಿಸುವುದು ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ ಪಾಲಿಸಬೇಕು.
ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ ಎಂಬ ಎಚ್ಚರಿಕೆ ಇರಬೇಕು, ಸಂವಿಧಾನ ಜಾರಿಗೆ ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಳ್ಕರ್ ವಿರೋಧಿಸಿದ್ದರು, ಬಿಜೆಪಿಯ ಮಾತೃಪಕ್ಷ ಆರ್‌ಎಸ್‌ಎಸ್ ಸಹಾ ಸಂವಿಧಾನ ಜಾರಿಯನ್ನು ವಿರೋಧಿಸಿತ್ತು.
ಡಾ. ಬಾಬಾ ಸಾಹೇಬರ ಸಂವಿಧಾನ ಜಾರಿಗೆ ಮುನ್ನ ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆ ಆಚರಿಸುವ, ಅನಾಗರಿಕ ವ್ಯವಸ್ಥೆ ಮತ್ತು ಶೂದ್ರರು, ದಲಿತರು, ಮಹಿಳೆಯರಿಗೆ ಶಿಕ್ಷಣ ವಿರೋಧಿಸುವ ಅಲಿಖಿತ ಮನುಸ್ಮೃತಿ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು, ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಭಾರತ ಸಂವಿಧಾನ ಅತ್ಯುನ್ನತ
ಚರಿತ್ರೆ, ಇತಿಹಾಸ, ಮರೆಯಬಾರದು, ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ್ಯ ಸಫಲವಾಗಲು ಸಾಧ್ಯ ಎಂಬುದಾಗಿ ಡಾ.ಅಂಬೇಡ್ಕರ್ ಹೇಳಿದ್ದರು, ವಿಶ್ವದ ಎಲ್ಲಾ ಸಂವಿಧಾನಗಳ ಅಧ್ಯಯನ ನಡೆಸಿ ಅತ್ಯುನ್ನತವಾದ ಭಾರತ ಸಂವಿಧಾನ ರಚಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮಂತ್ರಿಮಂಡಲದಲ್ಲಿದ್ದ ಅನಂತ ಕುಮಾರ ಹೆಗ್ಡೆ, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು” ಎಂಬುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು.
ಆದರೆ, ಮೋದಿ ಅವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ, ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲಿಲ್ಲ, ಆದ್ದರಿಂದ ಅನಂತ ಕುಮಾರ ಹೆಗ್ಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ, ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ಹಲವು ಭಾಗ್ಯ ಜಾರಿ
ಸಂವಿಧಾನದ ಧ್ಯೇಯೋದ್ದೇಶಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಯಾವುದೇ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು, ನಮ್ಮ ಸರ್ಕಾರ ಸಹಾ ಸಂವಿಧಾನದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿ ಮಾಡಿದ್ದೇವೆ.
ಜಗದ್ಗುರು ಬಸವಣ್ಣ 850 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ವಿರುದ್ಧ ಕರೆ ನೀಡಿದ್ದರು, ಆದರೆ, ಇವತ್ತಿಗೂ ಜಾತಿ ವ್ಯವಸ್ಥೆ ಹೋಗಿಲ್ಲ, ಆದ್ದರಿಂದ ಮಕ್ಕಳನ್ನು ಜಾತ್ಯತೀತರಾಗಿ ಬೆಳೆಸುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ಅತ್ಯುನ್ನತ ಗೌರವ ಎಂದರು.