ಬೆಂಗಳೂರು:ಚನ್ನಪಟ್ಟಣ ಉಪಚುನಾವಣೆ ಗೆಲುವಿನಲ್ಲೂ ಕಾಂಗ್ರೆಸ್ ವಿಕೃತಿ ಮೆರೆಯುತ್ತಿದೆ ಎಂದು ಯುವ ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಬರೆದಿರುವ ದೀರ್ಘ ಪತ್ರದಲ್ಲಿ ಅವರು, ಜೆಡಿಎಸ್ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂಬ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎದುರಾಳಿಯ ಅವಹೇಳನ
ಪಕ್ಷ ನನಗೆ ಟಾಸ್ಕ್ ಕೊಡಲಿ, ಕೇವಲ ಹದಿನೈದೇ ದಿನದಲ್ಲಿ ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ, ಜನಾದೇಶವನ್ನು ದೈವ ನಿರ್ಣಯವೆಂದು ಭಾವಿಸಿ, ಕ್ಷೇತ್ರದ ಜನತೆಯ ಪದತಲಕ್ಕೆ ಅರ್ಪಣೆಯಾಗಬೇಕಿದ್ದ ಗೆಲುವು ವಿರೋಧ ಪಕ್ಷವನ್ನು ನಿರ್ನಾಮ ಮಾಡುವ, ಎದುರಾಳಿಯ ಸೋಲನ್ನು ಅವಹೇಳನ ಮಾಡುವ, ವಿರೋಧಿ ನಾಯಕರನ್ನು ಕೀಳಾಗಿ ನಿಂದಿಸುವ ವಿಕಾರ ಅವಸ್ಥೆಗೆ ಹೋಗಬಾರದಿತ್ತು.
ಆ ಗೆಲುವಿಗೆ ನಾನೂ ಶುಭ ಹಾರೈಸಿದ್ದೆ ಹಾಗೂ ಚನ್ನಪಟ್ಟಣಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿದ್ದೆ, ಸೋಲಿನ ಹತಾಶೆಯಲ್ಲಿ ಗೆದ್ದವರ ಮೇಲೆ ನಾನು ವಿಷ ಕಾರಿಕೊಳ್ಳಲಿಲ್ಲ, ಅಂಥ ವಿಕೃತಿ ನನ್ನ ನೆರಳಿಗೂ ಸುಳಿಯಲು ಬಿಡುವುದಿಲ್ಲ.
ಶಾಸಕರೇನು ಕುರಿಗಳೇ
ಜೆಡಿಎಸ್ ಪಕ್ಷದಿಂದ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದರೆ ನಮ್ಮ ಶಾಸಕರೇನು ಮಾರುಕಟ್ಟೆಯಲ್ಲಿ ಸಿಗುವ ಮಾರಾಟದ ವಸ್ತುಗಳೇ ಅಥವಾ ಸಂತೆಯಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುವ ಕುರಿಗಳೇ ಅಥವಾ ಹರಾಜಿಗಿಟ್ಟ ಸರಕೇ.
ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಇವರ ಪಾಲಿಗೆ ಬೀದಿಯಲ್ಲಿ ಬಿಕರಿಯಾಗುವ ಪದಾರ್ಥಗಳೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನೊಬ್ಬ, ವಿಧಾನಸಭಾಧ್ಯಕ್ಷರಿಂದ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಸಂವಿಧಾನಬಾಹಿರ, ಜನತಂತ್ರ ವಿರೋಧಿ ಕೃತ್ಯಕ್ಕೆ ಇಳಿದು ಒಬ್ಬ ಕ್ರಿಮಿನಲ್ ರೀತಿ ಮಾತನಾಡುತ್ತಾನೆಂದರೆ, ಎಂತಹ ಸ್ಥಿತಿಯಲ್ಲಿ ಕರ್ನಾಟಕ ಇದೆ ಎಂಬುದನ್ನು ಬಿಂಬಿಸುತ್ತದೆ.
ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಸಂವಿಧಾನದ ಪ್ರತಿಯನ್ನು ಕೈಯ್ಯಲ್ಲಿ ಹಿಡಿದು ಪ್ರಮಾಣವಚನ ಸ್ವೀಕರಿಸುತ್ತಾರೆ, ನಿತ್ಯವೂ ಸಂವಿಧಾನ ಪೀಠಿಕೆ ಪಠಣ ಮಾಡುತ್ತಾರೆ, ಯಾವ ಪುರುಷಾರ್ಥಕ್ಕೆ, ಅನ್ಯಪಕ್ಷಗಳ ಶಾಸಕರನ್ನು ಖರೀದಿ ಮಾಡುತ್ತೇವೆ, ಎಗರಿಸಿಕೊಂಡೇ ಹೋಗುತ್ತೇವೆ ಎಂದರೆ, ಇವರು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಕ್ಷಣೆ ಮಾಡುತ್ತಾರೆಯೇ, ಗೆಲುವಿನ ಅಮಲು, ಅಧಿಕಾರದ ಅಹಂಕಾರ ನಾಲಿಗೆಯ ಗುಣವನ್ನು ನಿಕೃಷ್ಟಗೊಳಿಸಿದೆ.
ರಾಜಕಾರಣ ಮಾರಾಟವಲ್ಲ
ಇದಕ್ಕೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿಲ್ಲ ಎಬುದಾಗಿ ಭಾವಿಸಿದ್ದರೆ, ಅದು ಮೂರ್ಖತನ, ರಾಜಕಾರಣ ಎಂದರೆ ಖರೀದಿ ಅಥವಾ ಮಾರಾಟವಲ್ಲ, ವ್ಯಾಪಾರ ಅಲ್ಲವೇ ಅಲ್ಲ.
ನಮ್ಮ ಶಾಸಕರು ರಾಜಕೀಯ ಉದ್ದೇಶಕ್ಕಾಗಿ ನಮ್ಮೊಂದಿಗಿಲ್ಲ, ಪಕ್ಷ ಮತ್ತು ಶಾಸಕರ ನಡುವೆ ರಕ್ತ ಸಂಬಂಧಕ್ಕಿಂತ ಮಿಗಿಲಾದ ಗಾಢ ಬಾಂಧವ್ಯವಿದೆ, ನಾಯಕರು-ಶಾಸಕರ ನಡುವೆ ಬಿಡಿಸಲಾಗದ ಭಾವನಾತ್ಮಕ ಬೆಸುಗೆ ಇದೆ.
’ನಿಖಿಲ್ ಬಚ್ಚಾ.. ಪಾಪ ನಿಖಿಲ್..’ ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲ ಬುದ್ಧಿಯ ಮನಸ್ಥಿತಿಯವನಲ್ಲ ನಾನು.
ಅಧಿಕಾರದ ಹಪಾಹಪಿ
ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್ ಸಿಕ್ಕಿದರೆ, ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು.
ಗೆದ್ದಲು ಕಟ್ಟಿದ ಹುತ್ತದೊಳಗೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷ ಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ.
ಹೆದರಿ ಕೂರುವುದಿಲ್ಲ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ನನ್ನ ಸೋಲು ಅನಿರೀಕ್ಷಿತ, ಸೋಲು ಏಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ, ಇಂಥ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ, ಸತತ ಹೋರಾಟಗಳ ಮೂಲಕ ಫೀನಿಕ್ಸ್‌ನಂತೆ ಎದ್ದು ಬಂದಿದೆ, ಪಕ್ಷದ ಇಂತಹ ಅನೇಕ ಏಳುಬೀಳಿನ ದಾರಿಯಲ್ಲಿ ನಾನೊಬ್ಬ ಸಣ್ಣ ಪಯಣಿಗ.
ಪಕ್ಷ ಅನೇಕ ನಾಯಕರನ್ನು ರಾಜ್ಯಕ್ಕೆ ಧಾರೆಯೆರೆದು ಕೊಟ್ಟಿದೆ, ಅದು ಮಣ್ಣಿನಮಗ ದೇವೇಗೌಡರ ಗರಡಿಯ ಫಲ.
ಸೋಲು ನನಗೆ ನೋವುಂಟು ಮಾಡಿದೆ, ನಿಜ, ಇಲ್ಲ ಎಂಬುದಾಗಿ ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ, ಹಾಗಂತ, ಸೋಲುತ್ತೇನೆಂದು ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ, ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ, ಕೆಲವು ಅಂಶಗಳಿಂದ ಹಿನ್ನಡೆಯಾಗಿದೆ, ಆದರೂ, ಮತ್ತೆ ಪುಟಿದೆದ್ದು ಬರುವ ಛಲ ನನಗಿದೆ.
ಛಲದಿಂದ ಎದ್ದು ಬರುವೆ
ನೋವು ಭರಿಸುವ ಶಕ್ತಿ ಹೇಗೆ ನನ್ನಲ್ಲಿ ತುಂಬಿದೆಯೋ, ಹಾಗೆಯೇ ಛಲದಿಂದ ಎದ್ದು ಬರುವ ಕೆಚ್ಚನ್ನೂ ರಕ್ತಗತವಾಗಿ ರೂಢಿಸಿಕೊಂಡಿದ್ದೇನೆ, ಹಿಂದಿನ ಎರಡು ಸೋಲುಗಳು ನನಗೆ ಅಸಹಾಯಕತೆಯನ್ನು ಮೆಟ್ಟಿನಿಂತು, ಅಪಮಾನ ಧಿಕ್ಕರಿಸಿ ಸೆಣಸುವ ಆತ್ಮಬಲ ಕೊಟ್ಟಿವೆ, ಚನ್ನಪಟ್ಟಣದಲ್ಲಿಯೂ ಆದೇ ಛಲ, ಆತ್ಮಬಲದಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು, ಮುಖಂಡರ ಜತೆಗೂಡಿ ದಿಟ್ಟ ಹೋರಾಟ ನಡೆಸಿದ್ದೇನೆ.
ನನ್ನ ಸೋಲು ನನ್ನ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ, ಅದನ್ನು ನಾನು ಬಲ್ಲೆ, ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರಳೂ ದುಡಿದರು, ಮನೆ ಮನೆಯನ್ನೂ ತಲುಪಿ ನನ್ನ ಗೆಲುವಿಗಾಗಿ ಶ್ರಮಿಸಿದರು, ಅಂತಿಮವಾಗಿ ಸೋಲಾಯಿತು.
ಜನತಾ ಜನಾರ್ದನನ ನಿರ್ಣಯ, ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ, ವಿಪರ್ಯಾಸವೆಂದರೆ, ಗೆದ್ದವರಿಗೆ ನೆಮ್ಮದಿ ಇಲ್ಲ, ಗೆಲುವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಕನಿಷ್ಠ ಮನಃಸ್ಥಿತಿಯೂ ಇಲ್ಲ, ಆ ಮುಖಗಳಲ್ಲಿ ನಗುವೇ ಇಲ್ಲ, ಅವರ ಸಂಭ್ರಮ, ವಿಜೃಂಭಣೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ.
ಪಾಪ ಪ್ರಜ್ಞೆ ಕಾಡುತ್ತಿದೆ
ಸೋತ ಅಭ್ಯರ್ಥಿಯನ್ನು ಹೀಗಳೆಯುವ, ಎದುರಾಳಿ ಪಕ್ಷ ಮತ್ತು ಅದರ ನಾಯಕರನ್ನು ನಿಂದಿಸುವುದರಲ್ಲಿ ಮಗ್ನರಾಗಿದ್ದಾರೆ, ಅವರ ನಿಂದನೆಯ ವೈಖರಿ ನೋಡಿದರೆ ಅವರೆಷ್ಟು ಅನ್ಯನಿಂದನಾ ವೇದನೆಯಲ್ಲಿ ಮುಳುಗಿದ್ದಾರೆಂದು ಅರ್ಥವಾಗುತ್ತದೆ, ಅವರದ್ದು ಸತ್ಯದ ಜಯವಲ್ಲ, ಆ ಪಾಪ ಪ್ರಜ್ಞೆ ಅವರನ್ನು ಕಾಡುತ್ತಿದೆ.
ರಾಜಕೀಯ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿಯೆಬ್ಬಿಸಿದ್ದೀರಿ, ಹಾದಿಬೀದಿಯಲ್ಲಿ ರಾಜ್ಯದ ಮಾನ ಹರಾಜು ಹಾಕುತ್ತಿರುವ ನಿಮಗೆ ಎಳ್ಳಷ್ಟಾದರೂ ಪಾಪ ಪ್ರಜ್ಞೆ ಬೇಡವೇ.
ರಣರಂಗದಲ್ಲಿ ಸೋಲು ಗೆಲುವು ಸಹಜ, ಶಕುನಿ ರಾಜನೀತಿಗೆ ಹೆದರಿ ಪಲಾಯನ ನನ್ನ ನಡೆಯಲ್ಲ, ಹಾಗೆಂದು, ಯಾರಿಗೂ ಸವಾಲು ಹಾಕುವ ಅಗತ್ಯವೂ ಇಲ್ಲ, ನಮ್ಮ ಪಕ್ಷವೇನು, ನಾಯಕತ್ವದ ಬಲವೇನು, ಛಲದಂಕಮಲ್ಲರಾದ ಕಾರ್ಯಕರ್ತರ ಶಕ್ತಿಯೇನು ಎಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸೋಣ, ಪಕ್ಷವನ್ನು ಮರಳಿ ಕಟ್ಟೋಣ, ಬೀದಿಯಲ್ಲಿ ನಿಂತು ಜನಪರವಾಗಿ ಹೊರಾಡೋಣ ಎಂದಿದ್ದಾರೆ.