ಬೆಂಗಳೂರು:ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹಾಗೂ ಸಂಪುಟ ಪುನರ್ ರಚನೆ ಸಂಬಂಧ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದ್ದು, ಅದು ಯಾವಾಗ ಕಾರ್ಯಗತಕ್ಕೆ ಬರುತ್ತದೆ ಎಂಬುದು ಗೊತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ತಿಳಿಸಿದ್ದಾರೆ.
ಸಂಪುಟ ಪುನರ್ ರಚನೆ ವೇಳೆ ಸಚಿವರ ಖಾತೆಗಳು ಬದಲಾವಣೆ ಆಗಲಿವೆ, ಆದರೆ, ಎರಡು ವರ್ಷಕ್ಕಷ್ಟೇ ಮಂತ್ರಿ ಸ್ಥಾನ ಎಂಬುದಾಗಿ ಪಕ್ಷದ ವರಿಷ್ಠರು ಯಾರಿಗೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ತಲೆಬಾಗಲೇಬೇಕು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಿಂದ ಪಟ್ಟಿ ಬಂದರೆ ಅದಕ್ಕೆ ಎಲ್ಲರೂ ತಲೆಬಾಗಲೇಬೇಕು, ಅದಕ್ಕೆ ನಾನೂ ಹೊರತಲ್ಲ, ಸರ್ಕಾರಿ ಬಂಗಲೆ ತೆರವು ಮಾಡಲು ಸಿದ್ಧನಿದ್ದೇನೆ.
ಪಕ್ಷಕ್ಕಾಗಿ ಸಚಿವರುಗಳು ಯಾವ ತ್ಯಾಗಕ್ಕಾದರೂ ಸಿದ್ಧವಿರಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ ಸತೀಶ್, ಅದು ಅವರ ವೈಯಕ್ತಿಕ ಹೇಳಿಕೆ, ಅವರು ಹೇಳಿದ ತಕ್ಷಣ ಎಲ್ಲವೂ ಬದಲಾಗುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಅದು ಕಲ್ಲು-ಮುಳ್ಳುಗಳ ಹಾದಿ, ಸದ್ಯಕ್ಕೆ ನಮ್ಮ ಮುಂದೆ ಆ ವಿಚಾರ ಇಲ್ಲ, ಮುಂದೆ ನೋಡೋಣ ಏನು ಮಾಡುತ್ತಾರೋ ಎಂದರು.
ಅಧ್ಯಕ್ಷ ಗಾದಿ ತೆರವು
ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲೇ ಕೆಲವು ಮಾತುಕತೆಗಳು ನಡೆದಿವೆ, ಆ ವೇಳೆ ಶಿವಕುಮಾರ್ ಅವರು, ಅಧ್ಯಕ್ಷ ಗಾದಿ ತೆರವು ಮಾಡಬೇಕೆಂಬ ವಿಚಾರವೂ ಸೇರಿದೆ.
ಹಾಸನದಲ್ಲಿ ನಡೆಯಲಿರುವ ಅಹಿಂದ ಸಮಾವೇಶಕ್ಕೂ, ನಮಗೂ ಸಂಬಂಧವಿಲ್ಲ, ಅದನ್ನು ಯಾರು ಆಯೋಜಿಸಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ನನಗೆ ಆಹ್ವಾನವೂ ಬಂದಿಲ್ಲ ಎಂದರು.